ಪಾವಗಡ: ಗಣೇಶ ಚತುರ್ಥಿ ಸೇರಿದಂತೆ ಮುಂದಿನ ದಿನಗಳಲ್ಲಿ ನಡೆಯಲಿರುವ ಸಾರ್ವಜನಿಕ ಹಬ್ಬಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳಲ್ಲಿ ಡಿಜೆ ಹಾಗೂ ಅತಿಯಾದ ಶಬ್ದ ಉಂಟುಮಾಡುವ ಧ್ವನಿವರ್ಧಕಗಳ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಪಾವಗಡ ವೃತ್ತ ನಿರೀಕ್ಷಕ ಸುರೇಶ್ ಎಚ್ಚರಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಪಾವಗಡ ವೃತ್ತ ವ್ಯಾಪ್ತಿಯ ಡಿಜೆ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಶಬ್ದ ಮಾಲಿನ್ಯದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಉಚ್ಚ ನ್ಯಾಯಾಲಯದ ನಿರ್ದೇಶನಗಳು ಹಾಗೂ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಬ್ಬ, ಜಾತ್ರೆ ಹಾಗೂ ವಿವಿಧ ಸಮಾರಂಭಗಳ ಸಂದರ್ಭದಲ್ಲಿ ನಿಯಮ ಮೀರಿ ಹೆಚ್ಚಿನ ಶಬ್ದದಲ್ಲಿ ಡಿಜೆ ಬಳಸುವುದು ಕಂಡುಬಂದರೆ ಸಂಬಂಧ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಾರ್ವಜನಿಕರ ನೆಮ್ಮದಿ, ವಿದ್ಯಾರ್ಥಿಗಳು, ವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರ ಹಿತದೃಷ್ಟಿಯಿಂದ ಧ್ವನಿವರ್ಧಕಗಳ ಬಳಕೆಯಲ್ಲಿ ನಿಗದಿತ ನಿಯಮಗಳನ್ನು ಪಾಲಿಸುವುದು ಅಗತ್ಯ. ಕಾರ್ಯಕ್ರಮ ಆಯೋಜಕರು ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪಾವಗಡ ವೃತ್ತ ವ್ಯಾಪ್ತಿಯ ವಿವಿಧ ಡಿಜೆ ಮಾಲೀಕರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
