ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬೃಹತ್ ಅಕ್ರಮ ನಡೆದಿದ್ದು, 400 ಹುದ್ದೆಗಳಿಗೆ ತಲಾ 2 ಕೋಟಿ ರೂಪಾಯಿಯಂತೆ ಒಟ್ಟು 800 ಕೋಟಿ ರೂಪಾಯಿ ಲಂಚ ಪಡೆಯಲಾಗಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕಾಲೇಜುಗಳಲ್ಲಿ ಸಾಧಾರಣ ವಿದ್ಯಾರ್ಥಿಗಳಾಗಿದ್ದವರು ಹಣ ನೀಡಿದ್ದರಿಂದ KPSC ಪರೀಕ್ಷೆಯಲ್ಲಿ 400 ಅಂಕ ಪಡೆದಿದ್ದಾರೆ. ಅದೇ ಪ್ರತಿಭಾವಂತ/ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ (350 ರವರೆಗೆ) ನೀಡಲಾಗಿದೆ.
ಪಶುವೈದ್ಯಾಧಿಕಾರಿ ಹುದ್ದೆಗೆ 1 ರಿಂದ 2 ಕೋಟಿ ರೂ. ವಸೂಲಿ ಮಾಡಿರುವ ಬಗ್ಗೆ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಇದರಲ್ಲಿ ಐಎಎಸ್ (IAS) ಅಧಿಕಾರಿಯೊಬ್ಬರ ಹೆಸರು ಪ್ರಸ್ತಾಪವಾಗಿದ್ದು, ಸರ್ಕಾರದ ಸಚಿವರಿಗೂ ಹಣ ತಲುಪಿದೆಯೇ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
“ಲಂಚ ಪಡೆದವರೇ ತನಿಖೆ ಮಾಡಿದರೆ ಸತ್ಯ ಹೇಗೆ ಹೊರಬರುತ್ತದೆ?” ಎಂದು ಪ್ರಶ್ನಿಸಿದ ಅಶೋಕ್, KPSCಯ ಆಂತರಿಕ ತನಿಖೆಯನ್ನು ತೀವ್ರವಾಗಿ ವಿರೋಧಿಸಿದರು. ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ‘KPSC ಅಕ್ರಮಕ್ಕೆ ಅವಕಾಶ ನೀಡಲ್ಲ’ ಎಂದಿದ್ದರು. ಆದರೆ ಈಗ ಬೃಹತ್ ಅಕ್ರಮ ನಡೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಯಾರನ್ನೂ ಬಂಧಿಸಿಲ್ಲ ಎಂದು ಕಿಡಿಕಾರಿದರು. ಅಲ್ಲದೆ, ಪ್ರಕರಣದ ಸ್ಪಷ್ಟ ದಾಖಲೆಗಳಿದ್ದರೂ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
“ಈ ಅಕ್ರಮದ ಹಿಂದೆ ದೊಡ್ಡ ಜಾಲವೇ ಸಕ್ರಿಯವಾಗಿದೆ. ಯಾವುದೇ ಕಾರಣಕ್ಕೂ ಆಂತರಿಕ ತನಿಖೆಯಿಂದ ಸತ್ಯ ಹೊರಬರಲ್ಲ, ತಕ್ಷಣವೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.”
— ಆರ್. ಅಶೋಕ್, ವಿಪಕ್ಷ ನಾಯಕ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
