ಸರಗೂರು: ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸವಾಲುಗಳು, ಕುಟುಂಬ ಯೋಜನೆಯ ಮಹತ್ವ ಹಾಗೂ ಸಾರ್ವಜನಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ತಾಲ್ಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಜಾಗೃತಿ ಜಾಥಾವನ್ನು ಮಂಗಳವಾರ ಅರ್ಥಪೂರ್ಣವಾಗಿ ನೆರವೇರಿಸಲಾಯಿತು.
ಕಾರ್ಯಕ್ರಮಕ್ಕೆ ಮತ್ತು ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್, ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದ್ದು, 1987ರ ಜುಲೈ 11ರಂದು ವಿಶ್ವದ ಜನಸಂಖ್ಯೆ 5 ಬಿಲಿಯನ್ ತಲುಪಿದ ಹಿನ್ನೆಲೆಯಲ್ಲಿ ಈ ದಿನಕ್ಕೆ ವಿಶೇಷ ಮಹತ್ವ ಲಭಿಸಿತು ಎಂದು ತಿಳಿಸಿದರು. ನಂತರ 1989ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಈ ದಿನವನ್ನು ಅಧಿಕೃತವಾಗಿ ಜಾರಿಗೆ ತಂದಿತು. ಈ ಬಾರಿಯ ಕಾರ್ಯಕ್ರಮವು “ಯುವಜನರ ಆಸೆ ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವುದು” ಎಂಬ ಪ್ರಮುಖ ಘೋಷವಾಕ್ಯವನ್ನು ಹೊಂದಿದ್ದು, ಅತಿಯಾದ ಜನಸಂಖ್ಯೆಯಿಂದ ಉಂಟಾಗುವ ಬಡತನ, ನಿರುದ್ಯೋಗ ಮತ್ತು ಪರಿಸರ ನಾಶದಂತಹ ಗಂಭೀರ ಸವಾಲುಗಳ ಕುರಿತು ಜಾಗೃತಿ ಮೂಡಿಸುವುದು, ಕುಟುಂಬ ಯೋಜನೆಗೆ ಉತ್ತೇಜನ ನೀಡುವುದು, ಮಹಿಳೆಯರ ಆರೋಗ್ಯ, ಲಿಂಗ ಸಮಾನತೆ ಹಾಗೂ ಮಾನವ ಹಕ್ಕುಗಳ ರಕ್ಷಣೆಗೆ ಒತ್ತು ನೀಡುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶರತ್ ಹೆಚ್.ಎಸ್., ವಿಶ್ವ ಜನಸಂಖ್ಯಾ ದಿನದ ಆಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಕುಟುಂಬ ಯೋಜನೆ, ತಾಯಿ ಮತ್ತು ಶಿಶು ಆರೋಗ್ಯ, ಮಹಿಳೆಯರ ಸಬಲೀಕರಣ ಹಾಗೂ ಯುವಜನರಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಪ್ರಯತ್ನವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಎದುರಾಗುವ ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಸಂಬಂಧಿತ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬರೂ ಕುಟುಂಬ ಯೋಜನೆ ಮತ್ತು ಆರೋಗ್ಯ ಸೇವೆಗಳ ಬಗ್ಗೆ ಅರಿವು ಹೊಂದುವುದು ಅಗತ್ಯವಾಗಿದ್ದು, “ಸಣ್ಣ ಕುಟುಂಬ, ಸುಖೀ ಕುಟುಂಬ” ಎಂಬ ಧ್ಯೇಯದೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ತಾಲ್ಲೂಕು ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ ವರ್ಗ, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
