ತುಮಕೂರು: ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳು ಮಹಿಳೆಯರಿಗೆ ಹಾಗೂ ಯುವ ಜನತೆಗೆ ಅತ್ಯಂತ ಉಪಯುಕ್ತವಾದ ಯೋಜನೆಗಳಾಗಿವೆ ಎಂದು ಹೈಕೋರ್ಟ್ ಹಿರಿಯ ವಕೀಲರೂ, ಮಾಜಿ ಅಡ್ವೊಕೇಟ್ ಜನರಲ್ ಆದ ಪ್ರೊ.ರವಿವರ್ಮ ಕುಮಾರ್ ತಿಳಿಸಿದರು.
ಅವರು ಸೆ.20ರಂದು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಾನವ ಮಂಟಪ ಸಹಕಾರ ಸಂಘ ನಿಯಮಿತದ 8ನೇ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿ, ಜಾತ್ಯತೀತತೆಗಾಗಿ ಸಂಘವು ಕಾರ್ಯ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಬಾಲಕೃಷ್ಣಪ್ಪ ಮಾತನಾಡಿ, ಈ ಸಾಲಿನಲ್ಲಿ ಸಂಘವನ್ನು ಲಾಭ ನಷ್ಟಗಳ ನಡುವೆ ತಂದು ನಿಲ್ಲಿಸಿದ್ದೇವೆ. ಮುಂದಿನ ಸಾಲಿಗೆ ಖಂಡಿತ ಲಾಭದತ್ತ ಸಂಘವನ್ನು ಕೊಂಡೊಯ್ಯುತ್ತೇವೆ ಎಂದರಲ್ಲದೆ, ಈ ಬಾರಿ ಪ್ರಪ್ರಥಮವಾಗಿ ಶೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೈಗೊಂಡಿರುವುದು ನಮ್ಮ ಸಂಘದ ಹೆಗ್ಗಳಿಕೆ ಎಂದರು. ಇದೇ ಸಂದರ್ಭದಲ್ಲಿ ಅಧ್ಯಕ್ಷರು 20 ಸಾವಿರ ರೂ.ಗಳಿದ್ದ ಜಂಟಿ ಸಾಲದ ಮೊತ್ತವನ್ನು ಗರಿಷ್ಠ 50 ಸಾವಿರ ರೂ.ಗಳಿಗೆ ಹೆಚ್ಚಿಸಿ ಸಭೆಯ ಅನುಮೋದನೆ ಪಡೆದರು.
“ಮಹಿಳೆಯರಿಗೆ ಸಿಗುತ್ತಿರುವ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2000 ರೂ.ಗಳು ಮತ್ತು ಯುವ ಜನತೆಗೆ ಸಿಗುತ್ತಿರುವ ಯುವ ನಿಧಿ ಯೋಜನೆಯ ಮಾಸಿಕ 3000 ರೂ.ಗಳು ಅವರಿಗೆ ಅತ್ಯಂತ ಉಪಯುಕ್ತವಾಗಿದೆ. ಲೋಹಿಯಾ ಸಂಘಕ್ಕೆ ಇತ್ತೀಚೆಗೆ 300 ಮಂದಿ ಯುವನಿಧಿಯನ್ನು ಠೇವಣಿ ಮಾಡುತ್ತಿದ್ದಾರೆ. ಮಾನವ ಮಂಟಪ ಸಹಕಾರ ಸಂಘವೂ ಕೂಡ ಗೃಹಲಕ್ಷ್ಮಿ ಮತ್ತು ಯುವನಿಧಿಯನ್ನು ತಮ್ಮ ಸಂಘದ ಮೂಲಕ ತೆಗೆದುಕೊಳ್ಳುವಂತೆ ಮಾಡಿದರೆ ಸಂಘಕ್ಕೆ ಅನುಕೂಲವಾಗಲಿದೆ. ಠೇವಣಿಯಾಗಿದ್ದರೆ ಅವರಿಗೂ ಅನುಕೂಲ, ಸಂಘಕ್ಕೂ ಅನುಕೂಲವಾಗುತ್ತದೆ. ಇದನ್ನು ಆಡಳಿತ ಮಂಡಳಿ ಕಾರ್ಯರೂಪಕ್ಕೆ ತರಬೇಕು.”
ಪ್ರೊ.ರವಿವರ್ಮ ಕುಮಾರ್, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ನ್ಯಾಯವಾದಿಗಳು, ಹೈಕೋರ್ಟ್.
ಮತ್ತೋರ್ವ ಅತಿಥಿ, ಚಿಂತಕ ದೊರೈರಾಜ್ ಮಾತನಾಡಿ, ಕಾರ್ಮಿಕರ ಸಂಘ, ಸ್ಲಂ ಸಂಘ ಮತ್ತು ಮಾನವ ಮಂಟಪ ಸಹಕಾರ ಸಂಘ ಇವುಗಳ ಮಾರ್ಗ ಸ್ಪಷ್ಟವಾಗಿದೆ. ಆದರೆ ಇಲ್ಲಿ ಆದರ್ಶ ಮುನ್ನೆಲೆಗೆ ಬಂದು ವಾಸ್ತವ ಮರೆಯುವಂತಾಗಬಾರದು. ಏಕೆಂದರೆ ಆರ್ಥಿಕ ಸಬಲತೆ ಇಲ್ಲದೆ ಏನನ್ನೂ ಸಾಧಿಸಲಾಗದು. ಸಂಘದ ಮುನ್ನಡೆಗೆ ಆರ್ಥಿಕ ಸಬಲತೆ ಮುಖ್ಯವಾದುದು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭ ಎಸ್ ಎಸ್ ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಎಚ್ಡಿ ಪದವೀಧರರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನರಸೀಯಪ್ಪ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ನಿರ್ದೇಶಕರುಗಳಾದ ಡಾ.ಪಾವನ, ಡಾ.ವೀಣಾ ಮತ್ತು ತ್ರಿವೇಣಿಯವರು ಕುವೆಂಪುರವರ ‘ಓ ನನ್ನ ಚೇತನ’ ಕವಿತೆಯೊಂದಿಗೆ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷೆ ಹಾಗೂ ನಿರ್ದೇಶಕಿ ಡಾ.ಡಿ.ಅರುಂಧತಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ನಿರ್ದೇಶಕ ಡಿ.ಟಿ.ವೆಂಕಟೇಶ್ ಸ್ವಾಗತಿಸಿ, ಸಿಇಒ ಗಿರೀಶ್ ವಂದಿಸಿದರು. ಸಂಘದ ಉಪಾಧ್ಯಕ್ಷೆ ಕುಮಾರಿ ಜಿ. ಮಲ್ಲಿಕಾ, ನಿರ್ದೇಶಕರುಗಳಾದ ಮಹಾಲಿಂಗಪ್ಪ, ಚಂದ್ರಕುಮಾರ್, ಪ್ರದೀಪ್, ವಿರೂಪಾಕ್ಷ ಡ್ವಾಗೇರಹಳ್ಳಿ, ಉಮಾಶಂಕರ್ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
