ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸದೆ ಜಿಲ್ಲಾಡಳಿತ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ, ಶಾಸಕ ಸುರೇಶ್ ಗೌಡ ಅವರು ಈ ಬಾರಿಯ ದಸರಾ ಉತ್ಸವವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.
ಜಿಲ್ಲೆಯಲ್ಲಿ ತೀವ್ರ ಸ್ವರೂಪದ ಅಭಾವ ಮತ್ತು ಬರಗಾಲ ಆವರಿಸಿದ್ದರೂ ಜನರ ಕಷ್ಟಕ್ಕೆ ಸ್ಪಂದಿಸದೆ ಅದ್ಧೂರಿ ದಸರಾ ಆಚರಣೆಗೆ ಹೊರಟಿರುವ ಜಿಲ್ಲಾಡಳಿತದ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಜಿಲ್ಲೆಯಲ್ಲಿ ತೀವ್ರ ನೀರಾವರಿ ಅಭಾವವಿದ್ದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ದಸರಾ ಉತ್ಸವಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ಖಂಡನೀಯವಾಗಿದೆ. ರೈತರು ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದರೆ, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತು ಸಂಭ್ರಮಾಚರಣೆಯಲ್ಲಿ ತೊಡಗಿದೆ. ಆದ್ದರಿಂದ ತಕ್ಷಣವೇ ದಸರಾ ಆಚರಣೆಯನ್ನು ರದ್ದುಗೊಳಿಸಿ, ಕೆರೆಗಳಿಗೆ ನೀರು ಹರಿಸಲು ಮೊದಲ ಆದ್ಯತೆ ನೀಡಬೇಕು ಎಂದು ಸುರೇಶ್ ಗೌಡ ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ತಮ್ಮ ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದ ಹಳ್ಳಿಗಳ ಕೆರೆಗಳಿಗೆ ಇದುವರೆಗೆ ಒಂದು ಹನಿ ಹೇಮಾವತಿ ನೀರನ್ನೂ ಹರಿಸಲಾಗಿಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ತಾರತಮ್ಯದ ಹಿಂದೆ ಯಾರ ಕುಮ್ಮಕ್ಕಿದೆ ಎಂಬ ಪ್ರಶ್ನೆಯನ್ನು ಎತ್ತಿರುವ ಅವರು, ಸರ್ಕಾರ ಮತ್ತು ಜಿಲ್ಲಾಡಳಿತ ಮೊದಲು ಕುಡಿಯುವ ನೀರಿಗೆ ಮತ್ತು ತದನಂತರ ರೈತರ ಕೃಷಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಮುಖ್ಯವಾಗಿ ಹೆಬ್ಬಾಕ ಕೆರೆಗೆ ತಕ್ಷಣವೇ ನೀರು ಬಿಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
ತಮ್ಮ ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸುರೇಶ್ ಗೌಡ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, ಕೆರೆಗಳಿಗೆ ನೀರು ಹರಿಸದಿದ್ದಲ್ಲಿ ಜಿಲ್ಲಾಧಿಕಾರಿಯವರನ್ನು ಎಲ್ಲೂ ಓಡಾಡಲು ಬಿಡದೆ ಘೇರಾವ್ ಮಾಡಲಾಗುವುದು ಎಂದೂ ಅವರು ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
