ಸರಗೂರು: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ‘ಮೇಧಾ ಸುರಕ್ಷಾ ಕೇಂದ್ರ’ (ಹೆಚ್ಚಿನ ಅಪಾಯದ ಶಿಶುಗಳ ಬೆಳವಣಿಗೆ ಮತ್ತು ಆರೈಕೆ ಕ್ಲಿನಿಕ್) ಅನ್ನು ಗುರುವಾರ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು.
ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಲಾಸ್ ಏಂಜಲೀಸ್ (ಯುಸಿಎಲ್ಎ), ಪ್ರೇಮಧಾರ ಫೌಂಡೇಶನ್ (ಅಮೆರಿಕ), ಎಎಸಿ ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಈ ವಿಶೇಷ ಕೇಂದ್ರವನ್ನು ಆರಂಭಿಸಲಾಗಿದೆ. ಕಾರ್ಯಕ್ರಮವನ್ನು ಡಾ. ಸುಪ್ರಿಯಾ ಬಾವಿಶೆಟ್ಟಿ, ಸಮುದಾಯದ ಪೋಷಕ ಪ್ರತಿನಿಧಿ ಕಾವ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಜೈನ್ ಹಾಗೂ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ಶ್ರಾಫ್ ಜಂಟಿಯಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಕ್ಕಳ ತಜ್ಞ ಡಾ. ಕುಮಾರ್ ಜಿ.ಎಸ್., “ಮಗುವಿಗೆ ಕನಿಷ್ಠ ಎರಡು ವರ್ಷಗಳ ಕಾಲ ತಾಯಿಯ ಎದೆಹಾಲು ನೀಡುವುದರಿಂದ ಬುದ್ಧಿಶಕ್ತಿ ಹಾಗೂ ಮೆದುಳಿನ ಬೆಳವಣಿಗೆ ಉತ್ತಮವಾಗುತ್ತದೆ. ನವಜಾತ ಶಿಶುಗಳಲ್ಲಿ ಹುಟ್ಟುವಾಗ ಉಂಟಾಗುವ ಉಸಿರುಗಟ್ಟುವಿಕೆ, ಅಳದಿರುವುದು, ಮೆದುಳಿನ ಸೋಂಕು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವಂತಹ ತೊಂದರೆಗಳನ್ನು ಹೊಸ ತಂತ್ರಜ್ಞಾನದ ನೆರವಿನಿಂದ ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಬಹುದಾಗಿದೆ. ಈವರೆಗೆ ಆಸ್ಪತ್ರೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ,” ಎಂದು ಮಾಹಿತಿ ನೀಡಿದರು.
ಅಮೆರಿಕದಿಂದ ಆಗಮಿಸಿದ್ದ ವಿಶೇಷ ಅತಿಥಿ ಡಾ. ಸುಪ್ರಿಯಾ ಬಾವಿಶೆಟ್ಟಿ ಮಾತನಾಡಿ, “ನಾನು ವಿದೇಶದಲ್ಲಿ ಹುಟ್ಟಿ ಬೆಳೆದಿದ್ದರೂ ಇಲ್ಲಿನ ಸಮುದಾಯದ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ವಿವೇಕಾನಂದ ಆಸ್ಪತ್ರೆಯ ನುರಿತ ವೈದ್ಯರ ತಂಡ ಹಾಗೂ ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಿರುವುದು ಸಂತಸ ತಂದಿದೆ,” ಎಂದರು. ಇದೇ ವೇಳೆ ಡಾ. ಸುಷ್ಮ, ಡಾ. ದೀಪಶ್ರೀ ಹಾಗೂ ಡಾ. ಕುಮಾರ್ ಜಿ.ಎಸ್. ಅವರ ಸೇವೆಯನ್ನು ಕೊಂಡಾಡಿದರು.
ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ಶ್ರಾಫ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಯೋಜನೆಗೆ ಸಹಕರಿಸಿದ ದಾನಿಗಳು, ವೈದ್ಯರು ಮತ್ತು ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಡಾ. ಶಂಕರ್ ಹೆಚ್.ಕೆ., ಆಸ್ಪತ್ರೆ ವ್ಯವಸ್ಥಾಪಕಿ ಸಂಧ್ಯಾ ಬಿ.ಜಿ., ವೈದ್ಯರಾದ ಡಾ. ಅಭಿಷೇಕ್, ಡಾ. ಅರ್ಜುನ್, ಡಾ. ನಾಗೇಶ್ ಹಾಗೂ ಸಿಬ್ಬಂದಿಗಳಾದ ನಾಗರತ್ನ ಪದ್ಮ, ಸಂಗೀತ, ರೂಪೇಶ್, ಬಂಗಾರಶೆಟ್ಟಿ, ಕೃಷ್ಣಕುಮಾರ್ ಸೇರಿದಂತೆ 120ಕ್ಕೂ ಹೆಚ್ಚು ಸಾರ್ವಜನಿಕರು, ತಾಯಂದಿರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
