ಬೆಳ್ತಂಗಡಿ: ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕೋಳಿ ಸಾಕಾಣಿಕೆ ರೈತರ ಸಮಾಲೋಚನಾ ಸಭೆಯು ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ಜರುಗಿತು. ಒಕ್ಕೂಟದ ಅಧ್ಯಕ್ಷರಾದ ಶ್ರೀ ಸಯ್ಯದ್ ಹಸನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಪ್ರಧಾನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಿ.ಕೆ. ಅವರು ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಕ್ಷರು ಒಕ್ಕೂಟದ ಮುಂದಿನ ಕಾರ್ಯ ಯೋಜನೆಗಳನ್ನು ವಿವರಿಸಿದ ಬಳಿಕ ನಡೆದ ಮುಕ್ತ ಚರ್ಚೆಯಲ್ಲಿ, ಕೋಳಿ ಸಾಕಾಣಿಕೆ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳು ಹಾಗೂ ಕಂಪನಿಗಳ ಧೋರಣೆಯ ಕುರಿತು ಸುದೀರ್ಘವಾಗಿ ಚರ್ಚಿಸಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಒಕ್ಕೂಟದ ಕಾರ್ಯಚಟುವಟಿಕೆಗಳನ್ನು ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಸೂಕ್ತ ಸ್ಥಳದಲ್ಲಿ ಸ್ವಂತ ಕಚೇರಿಯನ್ನು ಪ್ರಾರಂಭಿಸಲು ತೀರ್ಮಾನಿಸಲಾಯಿತು. ಹಾಗೆಯೇ ಎಲ್ಲಾ ಕಂಪನಿಗಳು ಕನಿಷ್ಠ ಜಿ.ಸಿ. ದರವನ್ನು 10 ರೂಪಾಯಿಗಳಿಗೆ ಏರಿಕೆ ಮಾಡುವಂತೆ ಆಗ್ರಹಿಸಲು ನಿರ್ಧರಿಸಲಾಯಿತು. ಕೋಳಿ ಲಿಫ್ಟಿಂಗ್ ಗೆ ಕಂಪನಿಗಳು ನೀಡುವ ಲೇಬರ್ ದರ ತೀರಾ ಕಡಿಮೆಯಿರುವುದರಿಂದ ರೈತರೇ ಸ್ವಂತ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ ಹಾಗೂ ಹಂತ-ಹಂತವಾಗಿ ಲಿಫ್ಟ್ ಮಾಡುವುದರಿಂದ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಗಳೇ ಲಿಫ್ಟಿಂಗ್‌ಗೆ ಕಾರ್ಮಿಕರನ್ನು ಒದಗಿಸಬೇಕು ಮತ್ತು ಲಿಫ್ಟಿಂಗ್ ವೆಚ್ಚವನ್ನು ರೈತರ ಮೇಲೆ ಹಾಕಬಾರದು ಎಂದು ಕಂಪನಿಗಳೊಂದಿಗೆ ಗಂಭೀರ ಮಾತುಕತೆ ನಡೆಸಲು ತೀರ್ಮಾನಿಸಲಾಯಿತು.
ಇದಲ್ಲದೆ, ಫೀಡಿನಲ್ಲಿ ನೊಣ ನಿಯಂತ್ರಣ ಔಷಧ ಬೆರೆಸದ ಕಂಪನಿಗಳ ನಿರ್ಲಕ್ಷ್ಯದಿಂದಾಗಿ ನೊಣದ ಬಾಧೆ ಹೆಚ್ಚಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದರೆ ಸಮಸ್ಯೆ ನಿಯಂತ್ರಿಸಬೇಕಾದ ಕಂಪನಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ರೈತರ ಮೇಲೆ ಗೂಬೆ ಕೂರಿಸಿ ಕೋಳಿ ಸಾಕಾಣಿಕೆಯನ್ನು ಸ್ಥಗಿತಗೊಳಿಸುತ್ತಿರುವುದನ್ನು ಒಕ್ಕೂಟವು ತೀವ್ರವಾಗಿ ಖಂಡಿಸಿದ್ದು, ಇದರ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದೆ. ನೊಣ ನಿಯಂತ್ರಣ ಔಷಧದ ವೆಚ್ಚವನ್ನು ರೈತರ ಮೇಲೆ ಹೊರಿಸದೆ, ಕಂಪನಿಗಳೇ ಫೀಡಿನಲ್ಲಿ ಔಷಧ ಬೆರೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಲ್ಲಾ ಕಂಪನಿಗಳಿಗೆ, ಕ್ಷೇತ್ರದ ಶಾಸಕರಿಗೆ ಹಾಗೂ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಸಂಘಟನೆಯನ್ನು ಬಲಪಡಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ಘಟಕಗಳನ್ನು ರಚಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ಕಡಬ ತಾಲೂಕಿನ ಜವಾಬ್ದಾರಿಯನ್ನು ಸೂರ್ಯನಾರಾಯಣ ಭಟ್, ಮೂಡುಬಿದಿರೆ ತಾಲೂಕನ್ನು ಪ್ರದೀಪ್ ಕುಮಾರ್, ಪುತ್ತೂರು ತಾಲೂಕನ್ನು ರವೀಂದ್ರ ಕಾಂಚನ ಹಾಗೂ ಬಂಟ್ವಳ ತಾಲೂಕನ್ನು ಧರ್ಮಪ್ಪ ಒಗ್ಗ ಅವರಿಗೆ ವಹಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಘಟಕವನ್ನು ನೂತನವಾಗಿ ರಚಿಸಲಾಗಿದ್ದು, ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಸುದರ್ಶನ್ ಶೆಟ್ಟಿ ಸಿದ್ದಕಟ್ಟೆ, ಉಪಾಧ್ಯಕ್ಷರಾಗಿ ರಕ್ಷಿತ್ ಹಾಗೂ ವೆಲೇರಿಯನ್ ನಡ, ಕಾರ್ಯದರ್ಶಿಯಾಗಿ ಪುಷ್ಪಕರ ಗೌಡ ಪೆರಿಯಡ್ಕ, ಜೊತೆ ಕಾರ್ಯದರ್ಶಿಗಳಾಗಿ ಮಹಮದ್ ಅಮೀನ್ ಹಾಗೂ ಅಭಿನಂದನ್ ಪಟ್ರಮೆ, ಕೋಶಾಧಿಕಾರಿಯಾಗಿ ಗಿರೀಶ್ ಪುತ್ತಿಲ, ಸಂಘಟನಾ ಕಾರ್ಯದರ್ಶಿಗಳಾಗಿ ಯೋಗೀಶ್ ಉಜಿರೆ ಹಾಗೂ ತಾರಾನಾಥ ಗೌಡ ಕೊಯ್ಯೂರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮಣ್ ಬಂಗೇರ ಅವರು ಆಯ್ಕೆಯಾದರು. ನೂತನ ಅಧ್ಯಕ್ಷರು ತಮ್ಮ ಮುಂದಿನ ಕಾರ್ಯಕ್ರಮಗಳ ರೂಪುರೇಷೆಯನ್ನು ಸಭೆಯ ಮುಂದಿಟ್ಟರು. ಅಂತಿಮವಾಗಿ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಜಯರಾಮ್ ಶೆಟ್ಟಿ ಅವರ ವಂದನಾರ್ಪಣೆಯೊಂದಿಗೆ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
