ಬೆಂಗಳೂರು: “ಪಾಕಿಸ್ತಾನಿಯರೆಲ್ಲರೂ ನಮ್ಮ ಶತ್ರುಗಳಲ್ಲ” ಎಂಬ ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆರ್ ಎಸ್ ಎಸ್ ಹಾಗೂ ಪಾಕಿಸ್ತಾನದ ನಡುವಿನ ಲಿಂಕ್ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
“ಪಾಕಿಸ್ತಾನಿಯರೆಲ್ಲರೂ ಶತ್ರುಗಳಲ್ಲ” ಎಂದು ಮೋಹನ್ ಭಾಗವತ್ ಹೇಳಿರುವುದು ಎರಡನೇ ಬಾರಿಯಾಗಿದ್ದು, ಆರ್ ಎಸ್ ಎಸ್ ಮುಖಂಡರು ಹಿಂದೆ ಐಎಸ್ ಐ ಹಾಗೂ ಉಗ್ರಗಾಮಿ ಸಂಘಟನೆಗಳೊಂದಿಗೆ ನಡೆಸಿದ್ದರೆನ್ನಲಾದ ರಹಸ್ಯ ಸಭೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಪೂರ್ವನಿಯೋಜಿತ ಎಂಬ ಸಂಶಯವನ್ನು ಹುಟ್ಟುಹಾಕಿವೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪುಲ್ವಾಮಾ ದಾಳಿಯ ತನಿಖೆಯ ಬಗ್ಗೆ ಇನ್ನೂ ತುಟಿ ಬಿಚ್ಚದಿರಲು ಆರ್ ಎಸ್ ಎಸ್ ಕಾರಣ ಎಂಬುದು ಈಗ ಬಟಾಬಯಲಾಗಿದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ಸಮಯ ಬಂದಾಗ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಬಿಂಬಿಸಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವುದು, ಅಧಿಕಾರದಲ್ಲಿದ್ದಾಗ ರಾಜತಾಂತ್ರಿಕ ಹಾಗೂ ರಹಸ್ಯ ಸಂಬಂಧಗಳನ್ನು ಕಾಯ್ದುಕೊಳ್ಳುವುದು ಬಿಜೆಪಿ ಮತ್ತು ಆರ್ ಎಸ್ ಎಸ್ ನ ದ್ವಂದ್ವ ನೀತಿಯಾಗಿದೆ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ತಾವು ಈ ಹಿಂದೆ ವಿಧಾನ ಪರಿಷತ್ತಿನಲ್ಲಿ “ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರ” ಎಂದಾಗ ತಮ್ಮ ಮೇಲೆ ವಾಗ್ದಾಳಿ ನಡೆಸಿದ್ದ ನಕಲಿ ದೇಶಪ್ರೇಮಿಗಳು ಈಗ ನಾಗಪುರದಿಂದ ಬಂದ ಆದೇಶಕ್ಕಾಗಿ ಮೌನವಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಸಂಘ ಪರಿವಾರ ಮತ್ತು ಬಿಜೆಪಿಯ ಹಿರಿಯ ನಾಯಕರು ಇತಿಹಾಸದಿಂದಲೂ ಪಾಕಿಸ್ತಾನ ಪ್ರೇಮವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ ಎಂದಿರುವ ಅವರು, ಗಡಿಯಲ್ಲಿ ವೀರ ಯೋಧರು ಹಾಗೂ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿರುವಾಗ ಭಾಗವತ್ ನೀಡಿದ ಹೇಳಿಕೆಯ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
