ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಭಾರೀ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ 14ನೇ ಆರೋಪಿ (ಎ-14) ಪ್ರದೋಷ್ ಸಲ್ಲಿಸಿದ್ದ ‘ಮಾಫಿ ಸಾಕ್ಷಿ’ (Approver) ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ (CCH-59) ನ್ಯಾಯಾಲಯ ಸೋಮವಾರ (ಆಗಸ್ಟ್ 10) ಪುರಸ್ಕರಿಸಿದೆ.
ಪ್ರಕರಣದಲ್ಲಿ ದರ್ಶನ್ ಆಪ್ತರೇ ಅವರ ವಿರುದ್ಧ ಸಾಕ್ಷಿ ಹೇಳಲು ಮುಂದಾಗಿರುವುದು ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಮತ್ತು ಪವಿತ್ರಾ ಗೌಡಗೆ ತೀವ್ರ ಆತಂಕ ಶುರುವಾಗಿದೆ.
11 ಪುಟಗಳ ಅರ್ಜಿಯಲ್ಲಿ ಏನಿದೆ?
ಪ್ರದೋಷ್ ನ್ಯಾಯಾಲಯಕ್ಕೆ ಸಲ್ಲಿಸಿರುವ 11 ಪುಟಗಳ ಕ್ಷಮಾದಾನ ಅರ್ಜಿಯಲ್ಲಿ, ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಜಯನಗರದ ಮೈದಾನದಲ್ಲಿ ನಟ ದರ್ಶನ್ ಪರಿಚಯವಾದ ದಿನದಿಂದ ಹಿಡಿದು, ಕೊಲೆ ಘಟನೆ ಹಾಗೂ ಜೈಲು ಪಾಲಾಗುವವರೆಗಿನ ಪ್ರತಿಯೊಂದು ಘಟನಾವಳಿಯನ್ನು ಎಳೆಎಳೆಯಾಗಿ ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಗಲು ಈ ಹಿಂದೆ ಪ್ರಾಸಿಕ್ಯೂಷನ್ (ಸರ್ಕಾರಿ ಅಭಿಯೋಗ) ಸಮ್ಮತಿ ಸೂಚಿಸಿತ್ತು. ಆದರೆ ನಟ ದರ್ಶನ್ ಪರ ವಕೀಲರು ಇದನ್ನು ತೀವ್ರವಾಗಿ ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದ್ದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಲಯ, ಇದೀಗ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.
ಈ ಮಹತ್ವದ ಬೆಳವಣಿಗೆಯಿಂದಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಕುತೂಹಲಕಾರಿ ಘಟ್ಟ ತಲುಪುವ ಸಾಧ್ಯತೆಯಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
