ತುಮಕೂರು: ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಹಾಗೂ ‘ಅಗ್ನಿಯುಗದ ಹರಿಕಾರ’ ಖುದಿರಾಮ್ ಬೋಸ್ ಅವರ 118ನೇ ಹುತಾತ್ಮ ದಿನವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ ಒ) ನೇತೃತ್ವದಲ್ಲಿ ತುಮಕೂರಿನ ವಿವಿಧ ಶಾಲಾ-ಕಾಲೇಜುಗಳು, ಹಾಸ್ಟೆಲ್ ಹಾಗೂ ಮೈದಾನಗಳಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ, “ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು ಹೋರಾಡಿದ ಖುದಿರಾಮ್ ಬೋಸ್, ತಮ್ಮ 18ನೇ ವಯಸ್ಸಿನಲ್ಲೇ ನೇಣುಗಂಬಕ್ಕೇರಿದರು. ನೇಣಿಗೆ ಹೋಗುವ ಮುನ್ನವೂ ಎದೆಯುಬ್ಬಿಸಿ, ಮುಖದಲ್ಲಿ ಮುಗುಳ್ನಗೆಯೊಂದಿಗೆ ಧೀರತನ ಮೆರೆದ ಅವರ ಬಲಿದಾನ ಕಂಡು ಬಂಗಾಳದ ಜನತೆ ದಿಗ್ಭ್ರಾಂತರಾದರು. ಅಂದಿನಿಂದ ಪ್ರತಿಯೊಬ್ಬ ತಾಯಂದಿರೂ ತಮ್ಮ ಮನೆಯಲ್ಲೂ ಖುದಿರಾಮ್ ಹುಟ್ಟಲಿ ಎಂದು ಬಯಸುವಷ್ಟು ಅವರು ಜನಮಾನಸದಲ್ಲಿ ಸ್ಫೂರ್ತಿಯಾದರು” ಎಂದು ಸ್ಮರಿಸಿದರು.
“ಬ್ರಿಟಿಷರ ದೌರ್ಜನ್ಯವನ್ನು ಭಾರತೀಯರು ಎಂದಿಗೂ ಸುಮ್ಮನೆ ಸಹಿಸುವುದಿಲ್ಲ ಎಂಬುದನ್ನು ಪೂರ್ವ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಕೆಚ್ಚೆದೆಯಿಂದ ತೋರಿಸಿಕೊಟ್ಟ ಧೀರ ಯೋಧ ಖುದಿರಾಮ್. ಬಂಗಾಳದ ಜನತೆ ಅವರನ್ನು ‘ಅಗ್ನಿ ಶಿಶು’ ಹಾಗೂ ‘ಚಿತೆಯ ಮೇಲೆ ಜೀವನದ ಜಯಗಾನ ಹಾಡಿದ ಕ್ರಾಂತಿಕಾರಿ’ ಎಂದು ಕೊಂಡಾಡಿದರು. ಅವರ ಬಡಜನರ ಮೇಲಿನ ಪ್ರೀತಿ ಮತ್ತು ತ್ಯಾಗದ ಹಾದಿ ಇಂದಿಗೂ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಪ್ರೇರಣೆಯಾಗಿದೆ” ಎಂದರು.
ಖುದಿರಾಮ್ ಬೋಸ್ ಅವರ ತ್ಯಾಗದಿಂದ ಪ್ರೇರಣೆ ಪಡೆದು, ಇಂದಿನ ವಿದ್ಯಾರ್ಥಿ ಸಮುದಾಯವು ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕು, ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಹಾಗೂ ಸಮಾಜದ ಪ್ರತಿಯೊಂದು ಅನ್ಯಾಯದ ವಿರುದ್ಧ ಹೋರಾಡಲು ಮುಂದಾಗಬೇಕು ಎಂದು ಕರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕನಸಿನ ಭಾರತವನ್ನು ನಿರ್ಮಿಸಲು ಶ್ರಮಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ ಒ ಜಿಲ್ಲಾ ಪದಾಧಿಕಾರಿಗಳಾದ ಭರತ್, ಸೈಯದ್, ಸಂಘಟನಾಕಾರರಾದ ಮಧು, ಪ್ರಶಾಂತ್, ರಮೇಶ್ ಸೇರಿದಂತೆ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
