ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಶಾಲಾ ಶತಮಾನೋತ್ಸವ ಕಾರ್ಯಕ್ರಮವೊಂದರಲ್ಲಿ ಕೊಪ್ಪಳದ ಶ್ರೀ ಗವಿಮಠದ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಗೆ ತೀವ್ರ ಮುಜುಗರ ಉಂಟಾದ ಘಟನೆ ಸಂಭವಿಸಿದೆ. ಪ್ರವಚನ ನೀಡುತ್ತಿದ್ದ ವೇಳೆ ವೇದಿಕೆಯಲ್ಲಿ ಉಂಟಾದ ಗದ್ದಲ ಹಾಗೂ ಮೈಕ್ ಕಿರಿಕಿರಿಯಿಂದ ಬೇಸರಗೊಂಡ ಶ್ರೀಗಳು, ತಮ್ಮ ಪ್ರವಚನವನ್ನು ಅರ್ಧಕ್ಕೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ್ದಾರೆ.
ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ‘ಹೀರೇದ ಸೂಗಮ್ಮ ಶಾಲೆ’ಯ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಯವರು ಸಭಿಕರನ್ನು ಉದ್ದೇಶಿಸಿ ಪ್ರವಚನ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಾರ್ಯಕ್ರಮಕ್ಕೆ ಆಗಮಿಸಿದರು. ಸ್ವಾಮೀಜಿಗಳು ಮಾತನಾಡುತ್ತಿದ್ದಂತೆಯೇ ವೇದಿಕೆಯಲ್ಲಿದ್ದವರು ಮೈಕ್‌ನಲ್ಲಿ ಸಚಿವರ ಆಗಮನವನ್ನು ಘೋಷಿಸಿದರು. ಅದೇ ವೇಳೆ ಸಚಿವರ ಬೆಂಬಲಿಗರ ಕೂಗಾಟ ಹಾಗೂ ವಾದ್ಯಮೇಳದ ಸದ್ದು ಮುಂತಾದ ಗೊಂದಲಗಳು ಉಂಟಾಗಿ ಸ್ವಾಮೀಜಿಯವರ ಪ್ರವಚನಕ್ಕೆ ಭಂಗ ತಂದವು.
ಶ್ರೀಗಳ ಅಸಮಾಧಾನ:
ಕಾರ್ಯಕ್ರಮದ ಶಿಸ್ತು ತಪ್ಪಿದ್ದರಿಂದ ಹಾಗೂ ವೇದಿಕೆಯಲ್ಲಿ ಉಂಟಾದ ಗದ್ದಲದಿಂದ ತೀವ್ರ ಮುಜುಗರ ಮತ್ತು ಕಿರಿಕಿರಿ ಅನುಭವಿಸಿದ ಸ್ವಾಮೀಜಿಯವರು ತಮ್ಮ ಪ್ರವಚನವನ್ನು ತಕ್ಷಣವೇ ಸ್ಥಗಿತಗೊಳಿಸಿದರು. ಬಳಿಕ, ಈಶ್ವರ ಖಂಡ್ರೆ ಅವರಿಗೆ ಮಾತನಾಡುವಂತೆ ತಿಳಿಸಿ ತಮ್ಮ ಆಸನದಲ್ಲಿ ಕುಳಿತರು. ಅದಾದ ಕೆಲವೇ ನಿಮಿಷಗಳಲ್ಲಿ ಶ್ರೀಗಳು ವೇದಿಕೆಯಿಂದ ಹೊರನಡೆದರು.
ಸಾರ್ವಜನಿಕವಾಗಿ ಪೂಜ್ಯ ಸ್ವಾಮೀಜಿಗಳಿಗೆ ಉಂಟಾದ ಈ ಮುಜುಗರದ ಘಟನೆ ಮತ್ತು ವೇದಿಕೆಯಲ್ಲಾದ ಅವ್ಯವಸ್ಥೆಯ ಕುರಿತು ಗವಿಮಠದ ಲಕ್ಷಾಂತರ ಭಕ್ತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮತ್ತು ಬೇಸರ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
