ತುಮಕೂರು: ಜಿಲ್ಲೆಯ ನಿವಾಸಿಗಳ ದಶಕಗಳ ಕನಸಾದ ‘ತುಮಕೂರು–ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ’ ನನಸಾಗುವ ಹೊಸ್ತಿಲಿಗೆ ಬಂದು ತಲುಪಿದೆ. ಯೋಜನೆಯ ಸುದೀರ್ಘ ಯೋಜನಾ ವರದಿ (DPR) ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ಹಂತದ ಪ್ರಕ್ರಿಯೆಗಳಿಗಾಗಿ ರಾಜ್ಯ ಸರ್ಕಾರವು ಡಿಪಿಆರ್ ಸಹಿತ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿದೆ.
ಪ್ರಸ್ತಾವಿತ ತುಮಕೂರು ಮೆಟ್ರೋ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗ (Median) ಹಾಗೂ ಮೇಲ್ಭಾಗದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಹೆದ್ದಾರಿಯ ಮೇಲ್ಭಾಗದಲ್ಲಿ ಮೆಟ್ರೋ ಪಿಲ್ಲರ್‌ಗಳನ್ನು ನಿರ್ಮಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುಮತಿ ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪತ್ರ ಬರೆದಿದೆ.
ಈ ಯೋಜನೆಯು ಕೇಂದ್ರ ಸರ್ಕಾರದ ನೇರ ಹಣಕಾಸಿನ ನೆರವನ್ನು ಅವಲಂಬಿಸದೇ ಸಂಪೂರ್ಣವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (Public-Private Partnership) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಯೋಜನೆಗೆ ಹೂಡಿಕೆ ಮಾಡುವ ಕಂಪನಿಗಳಿಗೆ ನೆಲಮಂಗಲ, ದಾಬಸ್‌ಪೇಟೆ ಹಾಗೂ ತುಮಕೂರು ಭಾಗಗಳ ಮೆಟ್ರೋ ನಿಲ್ದಾಣಗಳು ಮತ್ತು ಹೆದ್ದಾರಿ ಪಕ್ಕದಲ್ಲಿ ವಾಣಿಜ್ಯ (Commercial) ಚಟುವಟಿಕೆಗಳನ್ನು ನಡೆಸಲು ಜಮೀನು ಒದಗಿಸಲು ನಿರ್ಧರಿಸಲಾಗಿದೆ. ಈಗಾಗಲೇ ದೇಶ-ವಿದೇಶಗಳ ಪ್ರಮುಖ ಕಂಪನಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ತೋರಿಸಿವೆ.
ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಹೆದ್ದಾರಿ ಬಳಕೆಯ ಅಧಿಕೃತ ಅನುಮತಿ ಸಿಗುತ್ತಿದ್ದಂತೆಯೇ, ರಾಜ್ಯ ಸರ್ಕಾರವು ಪರಿಶೀಲನೆ ನಡೆಸಿ ಮುಂದಿನ ಹಂತದ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಸ್ಥಳದಲ್ಲಿ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
