ಬೀದರ್: ನಗರದ ಮೋಹನ್ ಮಾರುಕಟ್ಟೆಯಲ್ಲಿರುವ ನಿತುರ್ಕರ್ ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿ ಭಾನುವಾರ ಕಲಾವಿದ ಸಚಿನ್ ಮನೋಲ್ಕರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಆಯೋಜಿತಗೊಂಡಿದ್ದ ಈ ವೈವಿಧ್ಯಮಯ ಪ್ರದರ್ಶನದಲ್ಲಿ ಸಚಿನ್ ಮನೋಲ್ಕರ್ ಅವರು ರಚಿಸಿದ ಅಪರೂಪದ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದ್ದು, ಇವು ಸ್ಥಳೀಯ ಕಲಾಸಕ್ತರ ಹಾಗೂ ಸಾರ್ವಜನಿಕರ ವಿಶೇಷ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶ್ರೀ ಸಿದ್ಧಲಿಂಗೇಶ್ವರ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಹಾಗೂ ಬೆಂಗಳೂರಿನ ಆರ್‌ಜಿಯುಎಚ್‌ಎಸ್ (RGUHS) ಬಿಒಎಸ್ ಸದಸ್ಯ ಡಾ. ರಾಜಕುಮಾರ್ ಎಂ. ಬಿರಾದಾರ ಅವರು ಕಲಾವಿದನ ಪ್ರಯತ್ನಕ್ಕೆ ಶುಭ ಹಾರೈಸಿದರು.
ಮತ್ತೋರ್ವ ಅತಿಥಿ, ಬೆಳ್ಳೂರು ಶಿಕ್ಷಣ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸೊಸೈಟಿಯ ಅಧ್ಯಕ್ಷ ದತ್ತಾತ್ರಿ ಬೆಳ್ಳೂರೆ ಅವರು ಮಾತನಾಡಿ, ಚಿತ್ರಕಲೆಯು ಕೇವಲ ಮನರಂಜನೆಯ ಕಲೆಯಾಗಿರದೆ, ನಮ್ಮ ಭಾವನೆ, ಸಂಸ್ಕೃತಿ ಹಾಗೂ ಬದುಕಿನ ಅನುಭವಗಳನ್ನು ಅಭಿವ್ಯಕ್ತಿಸುವ ಜೀವಂತ ಮಾಧ್ಯಮವಾಗಿದೆ ಎಂದು ಬಣ್ಣಿಸಿದರು. ಸಚಿನ್ ಮನೋಲ್ಕರ್ ಅವರ ಕಲಾಕೃತಿಗಳಲ್ಲಿ ವಿಭಿನ್ನ ವಿಚಾರಗಳು ಹಾಗೂ ಸೃಜನಶೀಲತೆ ಎದ್ದು ಕಾಣುತ್ತಿದ್ದು, ಇಂತಹ ಸೃಜನಶೀಲ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡುವ ಮೂಲಕ ಕಲಾ ಕ್ಷೇತ್ರವನ್ನು ಮತ್ತಷ್ಟು ಬೆಳೆಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಈ ಕಲಾ ಪ್ರದರ್ಶನದಲ್ಲಿ ವೈಷ್ಣವಿ, ಶ್ರೀಧರ್, ಪೃಥ್ವಿರಾಜ್, ಶ್ರೀಜಯ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದು, ಕಲಾವಿದ ಸಚಿನ್ ಅವರ ಕಲಾತ್ಮಕ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
