ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಚಿವ ಯತೀಂದ್ರ ಸಿದ್ದರಾಮಯ್ಯ, ಆರ್ಎಸ್ಎಸ್ ಅನ್ನು ಜಾತಿವಾದ, ಕೋಮುವಾದ ಮತ್ತು ಮನುವಾದದ ವಿಷ ತುಂಬಿರುವ ‘ಸಾವಿರ ತಲೆಯ ವಿಷಪೂರಿತ ಹಾವು’ ಎಂದು ಬಣ್ಣಿಸಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಂತರ ನಡೆದಿದೆ ಎನ್ನಲಾದ ‘ಶುದ್ಧೀಕರಣ’ ಪ್ರಕ್ರಿಯೆಯನ್ನು ಖಂಡಿಸಿರುವ ಅವರು, ಈ ವಿಚಾರವಾಗಿ ಆರ್ ಎಸ್ ಎಸ್, ಬಿಜೆಪಿ ಮತ್ತು ಶ್ರೀರಾಮ ಸೇನೆ ಸಂಘಟನೆಗಳು ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
“ಆರ್ ಎಸ್ ಎಸ್ ಸಾವಿರ ತಲೆಯ ವಿಷಕಾರಿ ಹಾವಿನಂತಿದ್ದು, ಸಮಾಜದಲ್ಲಿ ವಿಷವನ್ನು ಕಾರುತ್ತಾ ಇಡೀ ಸಮಾಜವನ್ನೇ ಕಲುಷಿತಗೊಳಿಸಲು ಯತ್ನಿಸುತ್ತಿದೆ. ಇದನ್ನು ನಿಯಂತ್ರಿಸದಿದ್ದರೆ ಸಮಾಜ ಹಾಗೂ ದೇಶಕ್ಕೆ ದೊಡ್ಡ ಹಾನಿಯಾಗುತ್ತದೆ” ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಆರ್ ಎಸ್ ಎಸ್ ಮತ್ತು ಅದರ ಅಂಗಸಂಸ್ಥೆಗಳು ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕ್ಷಮೆ ಯಾಚಿಸುವವರೆಗೆ ಕಾಂಗ್ರೆಸ್ ಕಾರ್ಯಕರ್ತರು ಎದೆಗುಂದದೆ ತಮ್ಮ ಹೋರಾಟ ಹಾಗೂ ಪ್ರತಿಭಟನೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಆರ್ ಎಸ್ ಎಸ್ ನ ಕಾನೂನುಬದ್ಧ ಸ್ಥಿತಿ, ಅದರ ಆಸ್ತಿಪಾಸ್ತಿಗಳು ಮತ್ತು ಬ್ಯಾಂಕ್ ಖಾತೆಗಳ ನಿರ್ವಹಣೆಯ ಕುರಿತು ಪ್ರಶ್ನೆಗಳನ್ನು ಎತ್ತಿದರು.
ಸಾಮಾಜಿಕ ಸಮಾನತೆ ಮತ್ತು ಜಾತಿ ಪದ್ಧತಿಯ ನಿರ್ಮೂಲನೆಯಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಆರ್ ಎಸ್ ಎಸ್ ನ ಇಂತಹ ಮನಸ್ಥಿತಿಯ ವಿರುದ್ಧ ಧ್ವನಿ ಎತ್ತಬೇಕು ಎಂದು ನಾಯಕರು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
