ಬೆಂಗಳೂರು: ಕರ್ತವ್ಯನಿರತ ಸಂಚಾರ (ಟ್ರಾಫಿಕ್) ಪೊಲೀಸ್ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಅವರನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಳಿಮಾವು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಅರುಣ್ ಅವರು ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ವಾಹನಗಳನ್ನು ಹ್ಯಾಂಡ್ ಸಿಗ್ನಲ್ ಮೂಲಕ ನಿಲ್ಲಿಸುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ಜೆಡಿಎಸ್ ನಾಯಕ ಗೊಟ್ಟಿಗೆರೆ ಮಂಜುನಾಥ್ ಅವರ ಕಾರನ್ನೂ ಸಹ ನಿಲ್ಲಿಸುವಂತೆ ಸಿಗ್ನಲ್ ನೀಡಿದ್ದರು.
ಕಾರು ತಡೆದಿದ್ದಕ್ಕೆ ತೀವ್ರ ಕೋಪಗೊಂಡ ಮಂಜುನಾಥ್, ಕಾರಿನಿಂದ ಕೆಳಗಿಳಿದು “ನನ್ನ ಗಾಡಿಯನ್ನೇ ಸ್ಟಾಪ್ ಮಾಡ್ತೀಯಾ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅಷ್ಟಕ್ಕೇ ನಿಲ್ಲದೆ ಪೊಲೀಸ್ ಸಿಬ್ಬಂದಿ ಅರುಣ್ ಅವರ ಕಾಲರ್ (ಕೊರಳಪಟ್ಟಿ) ಹಿಡಿದು ಹಲ್ಲೆ ನಡೆಸಿದ್ದು, ಕಾಲಿನಿಂದ ಒದೆಯಲು ಮುಂದಾಗಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
ಘಟನೆಯ ನಂತರ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಗೊಟ್ಟಿಗೆರೆ ಮಂಜುನಾಥ್ ಪರಾರಿಯಾಗಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು, ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
