ಮಧುಗಿರಿ: ಯಾರೂ ಸಹ ವಯಸ್ಸಾದ ತಂದೆ-ತಾಯಿಗಳನ್ನು ಅನಾಥಾಶ್ರಮಗಳಿಗೆ ಸೇರಿಸಬಾರದು ಎಂದು ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ಕಸಬಾ ವ್ಯಾಪ್ತಿಯ ಶ್ರೀ ಮೀನಗೊಂದಿ ಮಲೇರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ರಂಗನಾಥ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸಾಯಿ ಸೇವಾ ವೃದ್ಧಾಶ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ, ಈಗಾಗಲೇ 10 ಸಾವಿರ ಮೇವಿನ ಬೀಜ ನೀಡಿದ್ದು, ಇನ್ನೂ 20 ಸಾವಿರ ಮೇವಿನ ಬೀಜ ನೀಡಲಾಗುವುದು. ಜಿಲ್ಲೆಯ ಯಾವುದೇ ಊರಿನಲ್ಲಿ ಗೋಶಾಲೆ ಅಗತ್ಯವಿದೆಯೋ ಅಲ್ಲಿ ಗೋಶಾಲೆ ಮಾಡುತ್ತೇವೆ. ರೈತರಿಗೆ ಊಟದ ವ್ಯವಸ್ಥೆಯನ್ನೂ ಮಾಡುತ್ತೇವೆ ಎಂದರು.
ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ವೃದ್ಧಾಶ್ರಮ ಇರಲಿಲ್ಲ. ವೃದ್ಧಾಶ್ರಮಗಳ ಸಂಸ್ಕೃತಿ ನಮ್ಮದಲ್ಲ. ವೃದ್ಧಾಶ್ರಮಗಳಿಗೆ ತಂದೆ-ತಾಯಿಯರನ್ನು ಕಳುಹಿಸಬಾರದು ಎಂದು ನಾವೇ ಹೇಳಿದ್ದೇವೆ. ಕಾಲಘಟ್ಟದ ಪರಿಸ್ಥಿತಿಯ ಒತ್ತಡಗಳಿಂದಾಗಿ ವೃದ್ಧಾಶ್ರಮಗಳು ಹುಟ್ಟಿಕೊಂಡಿವೆ ಎಂದರು.
ಶ್ರೀ ಕ್ಷೇತ್ರದ ಭಕ್ತಮುನೀಶ್ವರ ಆಶ್ರಮದ ರಂಗನಾಥಾನಂದ ಸ್ವಾಮೀಜಿ, ಮೀನಗೊಂದಿ ಮಲೆ ರಂಗನಾಥಸ್ವಾಮಿ ದಾಸೋಹ ಸೇವಾ ಸಮಿತಿಯ ಎಂ.ಆರ್.ನಾರಾಯಣಶೆಟ್ಟರು, ಜಿ.ಪಂ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಎಂ.ಬಿ.ಮರಿಯಣ್ಣ, ಎಂ.ಕೆ ನಂಜುಂಡಯ್ಯ, ಎಸ್.ಮಹಾಲಿಂಗೇಶ್, ಡಿ.ಹೆಚ್.ನಾಗರಾಜು, ನಾಗಾರ್ಜುನ, ಎಂ.ಬಿ.ಮರಿಯಣ್ಣ ಕುರುಬರಹಳ್ಳಿ ಹರ್ಷ, ಮೈದನಲ್ಲಿ ಕಾಂತರಾಜು, ಸದಾನಂದ ದಾಸ್, ರಂಗನಾಥ ಸೇವಾ ಟ್ರಸ್ಟ್ ಅಧ್ಯಕ್ಷ ಬೊಡಪ್ಪ ಬೋವಿ, ಕಾರ್ಯದರ್ಶಿ ಸುಮುತಿ ಟಿ.ಎಂ ಬಸವರಾಜು, ಖಜಾಂಚಿ ಜಯಪ್ರಕಾಶ್, ರಂಗನಾಥಸ್ವಾಮಿ ದೇವಸ್ಥಾನದ ಧರ್ಮದರ್ಶಿ ದೇವದಾಸ್, ಮೂಡ್ಲಗಿರೀಶ್, ರಂಗಧಾಮಯ್ಯ ಇತರರಿದ್ದರು.
ಯಾರಿಗೆ ಮಕ್ಕಳಿರುವುದಿಲ್ಲವೋ, ಅಂತಹ ಪೋಷಕರಿಗೆ ಆಶ್ರಯ ಪಡೆಯಲು ವೃದ್ಧಾಶ್ರಮಗಳು ಸಹಾಯಕ. ಆದರೆ ಮಕ್ಕಳಿದ್ದರೂ ವಯಸ್ಸಾದ ತಂದೆ–ತಾಯಿಯರನ್ನು ವೃದ್ಧಾಶ್ರಮಗಳಿಗೆ ಬಿಡುವಂತಹ ಪಾಪದ ಕೆಲಸ ಯಾವುದೂ ಇಲ್ಲ. ಬರಗಾಲ ಬಂತು ಎಂದು ಯಾರೂ ಸಹ ಹೆದರುವುದು ಬೇಡ. ಯಾವುದೇ ರೂಪದಲ್ಲಾದರೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಅನ್ನಭಾಗ್ಯ ಪುಣ್ಯದ ಕೆಲಸ. 64 ರಲ್ಲಿ ಇಂದಿರಾಗಾಂಧಿ ಹೊರದೇಶದಿಂದ ಕಂಪ್ಯೂಟರ್ ತರಿಸಿ ಕೊಟ್ಟಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ, ಧೈರ್ಯವಾಗಿರಿ ನಿಮ್ಮ ಪರವಾಗಿ ನಾವಿದ್ದೇವೆ.
— ಕೆ.ಎನ್. ರಾಜಣ್ಣ, ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
