ಕೊರಟಗೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಸ್ಪರ್ಧಿಸುವುದಿಲ್ಲ ಮತ್ತು ಬೇರೆ ಕ್ಷೇತ್ರಕ್ಕೆ ವಲಸೆ ಹೋಗಲಿದ್ದಾರೆ ಎಂಬ ವದಂತಿಗಳಿಗೆ ಸ್ವತಃ ಮಾಜಿ ಶಾಸಕರೇ ತೆರೆ ಎಳೆದಿದ್ದಾರೆ. ತಮ್ಮ 58ನೇ ವರ್ಷದ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೊರಗೆ ಹೋಗುವುದಿಲ್ಲ, ಇಲ್ಲಿಯೇ ಇರುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ಜನ್ಮದಿನೋತ್ಸವದಲ್ಲಿ ಭಾಗವಹಿಸಿದ ಸುಧಾಕರ್ ಲಾಲ್, ಪಟ್ಟಣದ ಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಾರ್ಯಕ್ರಮದಲ್ಲಿ 25 ಕೆ.ಜಿ. ತೂಕದ ಬೃಹತ್ ಕೇಕ್ ಕತ್ತರಿಸಿ ಅಭಿಮಾನಿಗಳೊಂದಿಗೆ ಸಂಭ್ರಮ ಹಂಚಿಕೊಂಡರು.
ಇದೇ ವೇಳೆ ಮಾಧ್ಯಮದವರು ಕ್ಷೇತ್ರ ತೊರೆಯುವ ವದಂತಿ ಕುರಿತು ಪ್ರಶ್ನಿಸಿದಾಗ, “ಇಂದು ನನ್ನ ಹುಟ್ಟುಹಬ್ಬ, ಈ ದಿನ ಈ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದು ಬೇಡ. ಆದರೆ ಒಂದು ವಿಷಯ ಸ್ಪಷ್ಟ—ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ವಿಸ್ತೃತವಾಗಿ ತಿಳಿಸುತ್ತೇನೆ” ಎಂದು ಪ್ರತಿಕ್ರಿಯಿಸಿದರು. ಈ ಹೇಳಿಕೆ ಕೇಳಿ ಕಾರ್ಯಕರ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು.
ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಿದರು. ಸಾರ್ವಜನಿಕರಿಗೆ ಸಿಹಿ ತಿಂಡಿ ಹಂಚಿ, ನೆಚ್ಚಿನ ನಾಯಕನಿಗೆ ಬೃಹತ್ ಹೂಮಾಲೆ ಹಾಕಿ ಅಭಿನಂದಿಸಿದರು. ಪಟ್ಟಣದ ಎಸ್ಎಸ್ಆರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ವಿಶೇಷವಾಗಿ ಅಭಿಮಾನಿಯೊಬ್ಬರು ನೋಟುಗಳಿಂದ ತಯಾರಿಸಿದ ಹಾರವನ್ನು ನೆಚ್ಚಿನ ನಾಯಕನಿಗೆ ಹಾಕಿ ಗೌರವಿಸಿದ್ದು ಎಲ್ಲರ ಗಮನ ಸೆಳೆಯಿತು.
ನಾಯಕನ ಜನಪರ ಸೇವೆಗೆ ಮುಖಂಡರ ಮೆಚ್ಚುಗೆ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೆಡಿಎಸ್ ಮುಖಂಡ ಪ್ರಕಾಶ್ ಮಾತನಾಡಿ, “ಸುಧಾಕರ್ ಲಾಲ್ ಅವರು ಅಧಿಕಾರದಲ್ಲಿದ್ದಾಗಲೂ, ಇಲ್ಲದಿದ್ದಾಗಲೂ ಜನರ ಕಷ್ಟಗಳಿಗೆ ಮನೆ ಮಗನಂತೆ ಸ್ಪಂದಿಸಿದ್ದಾರೆ” ಎಂದರು. ಮುಖಂಡರಾದ ರಮೇಶ್, ಶಶಿ ಹಾಗೂ ಲಂಬೂ ರಾಜಣ್ಣ ಮಾತನಾಡಿ, “ಅವರ ಜನಪರ ಕಾಳಜಿ ಮತ್ತು ಕಾರ್ಯಕರ್ತರೊಂದಿಗಿನ ಆತ್ಮೀಯತೆಯೇ ಅವರ ನಿಜವಾದ ಶಕ್ತಿ” ಎಂದು ಬಣ್ಣಿಸಿದರು.
ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಮಾತನಾಡಿ, “ಕ್ಷೇತ್ರ ಬಿಟ್ಟು ಹೋಗುವುದಿಲ್ಲ ಎಂಬ ನಾಯಕನ ಧೈರ್ಯದ ಮಾತುಗಳು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಅವರ ನೇತೃತ್ವದಲ್ಲೇ ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಲಾಗುವುದು” ಎಂದು ತಿಳಿಸಿದರು.
ಈ ಶುಭ ಸಂದರ್ಭದಲ್ಲಿ ‘ಸ್ನೇಹಜೀವಿ ಪಿ.ಆರ್. ಸುಧಾಕರ್ ಲಾಲ್ ಅಭಿಮಾನಿ ಬಳಗ’ದ ಹನುಮಂತಣ್ಣ, ದೇವರಾಜು, ಬೈರಸಂದ್ರ ನಾಗರಾಜು, ಸೀಗೇಪಾಳ್ಯ ಪ್ರಕಾಶ್, ಬಸವರಾಜು ಹೆಚ್.ವಿ., ಮಂಜಣ್ಣ, ನವೀನಕುಮಾರ್, ಸಂತೋಷ್, ಕಾಂತರಾಜು, ಸತೀಶ್, ಶಿವರಾಮು, ಸಾಕರಾಜ್, ಲಕ್ಷ್ಮಣ್, ಶ್ರೀಧರ್, ವೆಂಕಟೇಶ್, ಕೆ.ಎನ್. ಹೇಮಂತ್, ದೀಪು, ಜಗಣ್ಣ, ನರಸಿಂಹರಾಜು, ಗೋವಿಂದರಾಜು, ರಾಜು ಬುಕ್ಕಾಪಟ್ಟಣ ಕಾಂತರಾಜು, ಪುಟ್ಟನರಸಪ್ಪ, ನಾಗೇಂದ್ರ, ಕಲೀಮ್, ಫಾರೂಖ್, ಕೌಶಿಕ್, ಹನುಮಂತರಾಜು, ರೇಣುಕ, ಸಿದ್ದರಾಜು, ಪಾಂಡು ವರ್ಧನ್ ಸೇರಿದಂತೆ ನೂರಾರು ಜೆಡಿಎಸ್ ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಿ ಶುಭ ಹಾರೈಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
