ಕೊರಟಗೆರೆ: ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಕಟ್ಟಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಜೆಡಿಎಸ್ ಸರ್ಕಾರ ತರುವುದು ನಮ್ಮ ಮೂಲ ಉದ್ದೇಶ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಹೇಳಿದರು.
ಕೊರಟಗೆರೆಯ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಜೆಡಿಎಸ್ ಮುಖಂಡರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ನಾನು ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೆ. ಆದರೆ ಅಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ಬೇಸತ್ತು, ನನ್ನ ಮಾತೃಪಕ್ಷವಾದ ಜೆಡಿಎಸ್‌ಗೆ ಮರಳಿದ್ದೇನೆ. ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದೇನೆ. ಹಿಂದೆ 15 ವರ್ಷ ಮಾಜಿ ಸಚಿವ ಸಿ. ಚಿನ್ನಿಗಪ್ಪ ಅವರ ಜೊತೆ ಜೆಡಿಎಸ್‌ನಲ್ಲಿ ಕೆಲಸ ಮಾಡಿದಾಗ ಸಿಕ್ಕ ಸಂತೋಷ ಕಾಂಗ್ರೆಸ್‌ನಲ್ಲಿದ್ದಾಗ ಇರಲಿಲ್ಲ.”
— ಪಿ.ಎನ್. ಕೃಷ್ಣಮೂರ್ತಿ, ಮಾಜಿ ಜಿ.ಪಂ. ಸದಸ್ಯ
ಕೊರಟಗೆರೆ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗೆ ಮೀಸಲಾತಿ ಇದ್ದರೆ ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು. ಸಾಮಾನ್ಯ ಕ್ಷೇತ್ರವಾದರೆ ವರಿಷ್ಠರು ಹಾಗೂ ಕಾರ್ಯಕರ್ತರ ಒಪ್ಪಿಗೆಯೊಂದಿಗೆ ತಾವೇ ಸ್ಪರ್ಧಿಸುವುದಾಗಿ ಕೃಷ್ಣಮೂರ್ತಿ ಪ್ರಕಟಿಸಿದರು.
ಮೊದಲ ಹಂತವಾಗಿ ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಟ್ರ್ಯಾಕ್ ಸೂಟ್‌ಗಳನ್ನು ವಿತರಿಸಲಾಗುವುದು ಎಂದರಲ್ಲದೇ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ತರಾತುರಿಯಲ್ಲಿ ಟಿಕೆಟ್ ಪಡೆದಾಗ ಪಕ್ಷದ ಆಂತರಿಕ ದ್ರೋಹದಿಂದಾಗಿ ಸೋಲು ಅನುಭವಿಸಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಮರಾಜು ಜಿ.ಆರ್. ಮಾತನಾಡಿ, “ಕ್ಷೇತ್ರದ ಸ್ಥಳೀಯ ಚುನಾವಣೆಗಳಲ್ಲಿ ಜೆಡಿಎಸ್ ಮುನ್ನಡೆಯಲ್ಲಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ಈಗ ಕೃಷ್ಣಮೂರ್ತಿ ಅವರ ನಾಯಕತ್ವದಲ್ಲಿ ಮತ್ತೆ ಗೆಲುವು ಸಾಧಿಸುತ್ತೇವೆ. ಮಾಜಿ ಶಾಸಕ ಸುಧಾಕರಲಾಲ್ ಅವರು ಮುಂದೆ ಸ್ಪರ್ಧಿಸುವುದಿಲ್ಲ ಎಂದಿದ್ದು, ವರಿಷ್ಠರು ತೀರ್ಮಾನಿಸುವ ಅಭ್ಯರ್ಥಿಗಾಗಿ ಶ್ರಮಿಸುತ್ತೇವೆ. ಎನ್ ಡಿಎ (NDA) ಮೈತ್ರಿಯನ್ನು ಮುಂದುವರಿಸಲಾಗುವುದು” ಎಂದರು.
ಮಾಜಿ ಕಾರ್ಯಾಧ್ಯಕ್ಷ ನರಸಿಂಹರಾಜು ಮಾತನಾಡಿ “ಕಳೆದ ಮೂರು ವರ್ಷಗಳಿಂದ ಕೊರಟಗೆರೆಯಲ್ಲಿ ಪಕ್ಷವನ್ನು ಮುನ್ನಡೆಸುವ ಸೂಕ್ತ ನಾಯಕನ ಕೊರತೆ ಇತ್ತು. ಪಿ.ಎನ್. ಕೃಷ್ಣಮೂರ್ತಿ ಅವರ ಆಗಮನದಿಂದ ಜೆಡಿಎಸ್ ಮತ್ತಷ್ಟು ಬಲಗೊಂಡಿದೆ” ಎಂದರು.
ಬೆಂಗಳೂರಿನ ಜೆಡಿಎಸ್ ಕೇಂದ್ರ ಕಛೇರಿ ‘ಜೆಪಿ ಭವನ’ದಲ್ಲಿ ರಾಜ್ಯಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಿ.ಎನ್. ಕೃಷ್ಣಮೂರ್ತಿ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ನೂತನ ಸಾರಥಿ ಸಿಕ್ಕಂತಾಗಿದೆ. ಮಾಜಿ ಶಾಸಕರಾದ ಪಿ.ಆರ್. ಸುಧಾಕರ್ ಲಾಲ್ ಅವರ ಹಿಂಜರಿಕೆಯ ನಡೆಯಿಂದ ಕಾರ್ಯಕರ್ತರಿಗೆ ತೀವ್ರ ಬೇಸರವಾಗಿದೆ. ವರಿಷ್ಠರ ತೀರ್ಮಾನದಂತೆ ನೂತನ ನಾಯಕ ಪಿ.ಎನ್. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತೇವೆ.
— ಕಾಮರಾಜು ಜಿ.ಆರ್, ತಾಲ್ಲೂಕು ಅಧ್ಯಕ್ಷರು, ಜಾತ್ಯಾತೀತ ಜನತಾದಳ (ಜೆಡಿಎಸ್)
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲಕ್ಷ್ಮೀಶ್, ಕೆ.ಎನ್. ಲಕ್ಷ್ಮೀನಾರಾಯಣ್, ಕೆ.ಜಿ. ರಮೇಶ್, ಅಶ್ವಥ್ ನಾರಾಯಣ್, ದೊಡ್ಡಯ್ಯ, ಮಾವತ್ತೂರು ಮಂಜುನಾಥ್, ಸಾಕರಾಜು, ರಂಗಣ್ಣ, ರಮೇಶ್ ಗುಂಡನಪಾಳ್ಯ, ಮುರುಡಪ್ಪ, ಶ್ರೀಧರ್, ಪುಟ್ಟನರಸಯ್ಯ, ಕಾಕಿಮಲ್ಲಣ್ಣ, ಅಪ್ಪಾಜಿಗೌಡ, ನಾಗರಾಜು, ರಮೇಶ್ ಬೈರಸಂದ್ರ, ಸಂತೋಷ್ ಗೌಡ, ಜಗದೀಶ್, ರೇಣುಕಾ ಸೇರಿದಂತೆ ಹಲವು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
