ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಹಾಗೂ ಪೆನ್ಡ್ರೈವ್ ಪತ್ತೆಯಾದ ಹಿನ್ನೆಲೆಯಲ್ಲಿ, ಅವರನ್ನು ವಿಐಪಿ ಸೆಲ್ನಿಂದ ಸಾಮಾನ್ಯ ಸಜಾ ಬಂಧಿಗಳ ಸೆಲ್ ಗೆ ವರ್ಗಾಯಿಸಲಾಗಿದೆ.
ಸಿಸಿಬಿ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರ ಬಳಿ ನೀಲಿ ಬಣ್ಣದ ರೆಡ್ಮಿ 5ಜಿ ಮೊಬೈಲ್ ಫೋನ್, ಚಾರ್ಜರ್, ನೋಟ್ ಬುಕ್ ಹಾಗೂ ಸ್ಯಾಂಡಿಸ್ಕ್ ಪೆನ್ಡ್ರೈವ್ ಪತ್ತೆಯಾಗಿತ್ತು.
ಮೊಬೈಲ್ ಹಾಗೂ ಪೆನ್ ಡ್ರೈವ್ ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳು ಇರುವುದು ಕಂಡುಬಂದಿದೆ. ಮೊಬೈಲ್ ಸಿಕ್ಕ ಪ್ರಕರಣ ಬೆಳಗಾಗುತ್ತಿದ್ದಂತೆ, ಪ್ರಜ್ವಲ್ ಅವರನ್ನು ವಿಐಪಿ ಸೆಲ್ನಿಂದ ಸುಮಾರು 20 ಕೈದಿಗಳಿರುವ ಸಾಮಾನ್ಯ ಸೆಲ್ಗೆ ವರ್ಗಾಯಿಸಲಾಗಿದೆ.
ಸಾಮಾನ್ಯ ಸೆಲ್ ನಲ್ಲಿದ್ದುಕೊಂಡು ಜೈಲಿನ ಕಡ್ಡಾಯ ಸಮವಸ್ತ್ರ ಧರಿಸಿ ಗ್ರಂಥಾಲಯ (ಲೈಬ್ರರಿ) ಕೆಲಸ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ಜೈಲು ಎಸ್.ಪಿ. ಅನ್ಶುಕುಮಾರ್ ಅವರಿಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ಹಾಗೂ ಪೆನ್ ಡ್ರೈವ್ ಹೇಗೆ ತಲುಪಿತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
