ಬೆಂಗಳೂರು: ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಂಗಳೂರಿನಲ್ಲಿರುವ ತಮ್ಮ ಪುತ್ರಿಯನಿವಾಸದಲ್ಲಿ ಸಾವನ್ನಪ್ಪಿದ್ದಾರೆ.
ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅವರಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆಯಾಗಿತ್ತು ಎನ್ನಲಾಗಿದೆ. ಇಂದು ಸ್ವಕ್ಷೇತ್ರ ತಿಪಟೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ತಿಪಟೂರು ಕ್ಷೇತ್ರದಿಂದ 2008 ಮತ್ತು 2018 ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್, ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಶಾಲಾ ಸಮವಸ್ತ್ರ ವಿವಾದ; ಬಿ.ಸಿ ನಾಗೇಶ್ ಸಚಿವರಾಗಿದ್ದ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಮತ್ತು ಶಿಸ್ತು ಪಾಲನೆ ವಿಷಯದಲ್ಲಿ ಉಂಟಾದ ವಿವಾದ ದೇಶದ ಗಮನ ಸೆಳೆದಿತ್ತು.
ಬಿ.ಇ. ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ತಮ್ಮ ರಾಜಕೀಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಪೂರ್ಣಕಾಲಿಕ ಕಾರ್ಯಕರ್ತರಾಗಿ ಪ್ರಾರಂಭಿಸಿದ್ದರು. ಮೃತರು ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.
ಬಿ.ಸಿ. ನಾಗೇಶ್ ಅವರ ನಿಧನದ ಹಿನ್ನೆಲೆ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ., “ನನ್ನ ಆತ್ಮೀಯ ಸ್ನೇಹಿತರಾಗಿದ್ದ, ಸರಳ ಸಜ್ಜನಿಕೆಯ ವ್ಯಕ್ತಿತ್ವದ, ಮಾಜಿ ಶಾಸಕರೂ ಹಾಗೂ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಅತ್ಯಂತ ಸಮರ್ಥವಾಗಿ ಸೇವೆ ಸಲ್ಲಿಸಿದ್ದ ತಿಪಟೂರಿನ ಶ್ರೀ ಬಿ.ಸಿ. ನಾಗೇಶ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ತಿಪಟೂರು ಮತ್ತು ತುಮಕೂರು ಭಾಗದ ಜನರ ಸೇವೆಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿಯೂ ಅವರು ಅಪಾರ ಶ್ರಮ ವಹಿಸಿದ್ದರು. ಅವರ ಅಗಲಿಕೆಯಿಂದ ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲದೆ, ತುಮಕೂರು ಭಾಗದ ಜನತೆ ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ” ಎಂದಿದ್ದಾರೆ.
ಸರಳತೆ, ಸೌಜನ್ಯ ಹಾಗೂ ಆತ್ಮೀಯತೆಯಿಂದ ಎಲ್ಲರ ಮನಗೆದ್ದಿದ್ದ ನಾಗೇಶ್ ಅವರೊಂದಿಗಿನ ಒಡನಾಟ ಮತ್ತು ಅವರ ಸಜ್ಜನಿಕೆಯ ವ್ಯಕ್ತಿತ್ವ ಸದಾ ನನ್ನ ಸ್ಮರಣೆಯಲ್ಲಿ ಉಳಿಯಲಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ದುಃಖತಪ್ತ ಕುಟುಂಬದ ಸದಸ್ಯರಿಗೆ, ಬಂಧುಬಳಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ಅಪಾರ ನೋವನ್ನು ಭರಿಸುವ ಶಕ್ತಿ ಮತ್ತು ಧೈರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ ಸೂಚಿಸಿದ್ದು, ಪಕ್ಷದ ಹಿರಿಯ ನಾಯಕರು, ತಿಪಟೂರು ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರೂ ಆದ ಶ್ರೀ ಬಿ.ಸಿ.ನಾಗೇಶ್ ಅವರು ಅಕಾಲಿಕವಾಗಿ ವಿಧಿವಶರಾದ ಸುದ್ದಿ ತೀವ್ರ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆ. ಸರಳತೆ, ವೈಚಾರಿಕ ಬದ್ಧತೆ, ನಿಷ್ಠೆ ಹಾಗೂ ಜನಪರ ಕಾಳಜಿಯ ವ್ಯಕ್ತಿತ್ವದಿಂದಲೇ ಹೆಸರಾಗಿದ್ದ ಅವರು, ಶಾಸಕರಾಗಿ ಹಾಗೂ ಸಚಿವರಾಗಿ ಮಾಡಿರುವ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಮತ್ತು ಪಕ್ಷದ ಸಂಘಟನೆಗೆ ನೀಡಿದ ಕೊಡುಗೆ ಅಪಾರ. ಅವರ ನಿರ್ಗಮನದಿಂದ ನಮ್ಮ ಪಕ್ಷ ಹಾಗೂ ನಾಡು ಒಬ್ಬ ಸಜ್ಜನಿಕೆಯ ಜನಪ್ರತಿನಿಧಿ ಹಾಗೂ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.
ಬಿ.ಸಿ. ನಾಗೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಹಾಗೂ ವಿವಿಧ ಪಕ್ಷಗಳ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
