ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹೋಬಳಿ ವ್ಯಾಪ್ತಿಯ ಮತ್ತಿಘಟ್ಟ ಗ್ರಾಮ ಪಂಚಾಯಿತಿಯ ಬೆಳಿಗೀಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ದುರಂತವೊಂದರಲ್ಲಿ 10 ವರ್ಷದ ಶಾಲಾ ವಿದ್ಯಾರ್ಥಿಯೋರ್ವ ದಾರುಣವಾಗಿ ಮೃತಪಟ್ಟಿದ್ದಾನೆ.
ಬೆಳಿಗೀಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಪಕ್ಕದಲ್ಲೇ ಇರುವ ನಂದಿನಿ ಡೈರಿ ಕಟ್ಟಡದ ಸಮೀಪ ಬೆಳಿಗ್ಗೆ ಸುಮಾರು 9.30 ರ ವೇಳೆಗೆ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಕಟ್ಟಡದ ಪಿಲ್ಲರ್ವೊಂದು ಏಕಾಏಕಿ ಕುಸಿದು ಬಿದ್ದಿದೆ.
ಆಟವಾಡುತ್ತಿದ್ದ ಧನುಷ್ ಬಿನ್ ಆನಂದ್ ಮೂರ್ತಿ (10 ವರ್ಷ) ಎಂಬ ಬಾಲಕನ ತಲೆಯ ಮೇಲೆಯೇ ಕಾಂಕ್ರೀಟ್ ಪಿಲ್ಲರ್ ಬಿದ್ದಿದ್ದರಿಂದ, ಬಾಲಕ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಪ್ರಾಣ ತೆತ್ತಿದ್ದಾನೆ. ಈ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಮಾಜಿ ಸಚಿವ ಮಾಧುಸ್ವಾಮಿ, ಎಸ್ಪಿ ಅಶೋಕ್ ಕೆ.ವಿ, ಅಡಿಷನಲ್ ಎಸ್ಪಿ ಗೋಪಾಲ್, ಡಿವೈಎಸ್ಪಿ ಉಮೇಶ್, ಮಕ್ಕಳ ಆಯೋಗದ ನಿರ್ದೇಶಕ ಸತ್ಯನಾರಾಯಣ ಶೆಟ್ಟಿ, ತುಮುಲ್ ಎಂ.ಡಿ ತಿಮ್ಮಣ್ಣ, ನಿರ್ದೇಶಕ ಶಿವಪ್ರಕಾಶ್, ತಹಸೀಲ್ದಾರ್ ಮಮತಾ ಎಂ ಹಾಗೂ ಬಿಇಒ ಕಾಂತರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಘಟನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
