ತಿಪಟೂರು: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಿಜೆಪಿ, ಸಂಘ ಪರಿವಾರದ ಮುಖಂಡರು ಮಾಡಿರುವ ಅವಮಾನ ಹಾಗೂ ಅಸ್ಪೃಶ್ಯತೆ ಆಚರಣೆ ಕೃತ್ಯ ಖಂಡಿಸಿ, ತಿಪಟೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಛಲವಾದಿ ಮಹಾಸಭಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರದ ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಬಿಜೆಪಿ ಹಾಗೂ ಸಂಘಪರಿವಾರದ ಕೃತ್ಯ ಖಂಡಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಛಲವಾದಿ ಮಹಾಸಭಾ ಅಧ್ಯಕ್ಷ ಭಜಗೂರು ಮಂಜುನಾಥ್, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಉತ್ತರಾಖಂಡದ ಹಾಲ್ದ್ವಾನಿ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಕಾರಣಕ್ಕೆ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀರಾಮ ಸೇನೆ ಸೇರಿದಂತೆ ಸಂಘ ಪರಿವಾರದ ಮನು ಸಂಸ್ಕೃತಿಯ ಸಂತತಿಗಳು ಮೈದಾನವನ್ನು ಗೋಮೂತ್ರದಿಂದ ಸ್ವಚ್ಛ ಮಾಡಿರುವುದು ಖಂಡನೀಯ. ಕೇಂದ್ರ ಸರ್ಕಾರ ಇದರ ನೈತಿಕ ಹೊಣೆ ಹೊರಬೇಕು ಎಂದರು.
“ಘಟನೆಗೆ ಕಾರಣವಾದ ವ್ಯಕ್ತಿಗಳ ಮೇಲೆ ದೇಶ ದ್ರೋಹದ ಪ್ರಕರಣ ದಾಖಲು ಮಾಡಿ, ಗಡಿಪಾರು ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಮನುವಾದಿಗಳಿಗೆ ದಲಿತರ ಏಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಮನುವಾದಿಗಳ ಕೃತ್ಯಗಳು ಇದೇ ರೀತಿ ಮುಂದುವರೆದರೆ ದೇಶದಲ್ಲಿ ಮತ್ತೊಂದು ಭೀಮಾ ಕೋರೆಗಾಂವ್ ಹೋರಾಟ ಕಾಣುವ ಕಾಲ ದೂರವಿಲ್ಲ. ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನೇ ಸಹಿಸದ ಬಿಜೆಪಿಯವರು ಗ್ರಾಮೀಣ ಭಾಗದಲ್ಲಿ ಸಾಮಾನ್ಯ ಜನರನ್ನು ಗೌರವದಿಂದ ಕಾಣಲು ಹೇಗೆ ಸಾಧ್ಯ..? ಕೇಂದ್ರ ಸರ್ಕಾರ ಇಂತಹ ಕಿಡಿಗೇಡಿಗಳ ಮೇಲೆ ಕಠಿಣ ಕಾನೂನು ಜಾರಿ ಮಾಡಬೇಕು.”
— ಭಜಗೂರು ಮಂಜುನಾಥ್, ಅಧ್ಯಕ್ಷರು, ಛಲವಾದಿ ಮಹಾಸಭಾ.
ಭೋವಿ ಸಮಾಜದ ಮುಖಂಡ ಶಂಕರಪ್ಪ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ದಲಿತರ ಮೇಲೆ ದೌರ್ಜನ್ಯಗಳು ನಿರಂತರ ನಡೆಯುತ್ತಿವೆ. ಪ್ರಜಾಪ್ರಭುತ್ವ ವಿರೋಧಿ, ಮನುಷ್ಯತ್ವ ವಿರೋಧಿ ಆಡಳಿತ ನಡೆಸುತ್ತಿರುವ ಕಾರಣಕ್ಕೆ ಉತ್ತರಾಖಂಡದ ಹಲ್ದ್ವಾನಿ ರಾಮ್ ಲೀಲಾ ಮೈದಾನದಲ್ಲಿ ದಲಿತ ಸಮುದಾಯದ ವ್ಯಕ್ತಿ ಭಾಷಣ ಮಾಡಿದ್ದಾರೆ ಎಂಬ ಕಾರಣಕ್ಕೆ ಗೋಮೂತ್ರ ಹಾಕಿ, ಹೋಮ ಹವನ ಮಾಡುವ ಮೂಲಕ ಶುದ್ಧೀಕರಣ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಕೇಂದ್ರ ಸರ್ಕಾರ ಇಂತಹ ನೀಚ ಕೃತ್ಯ ಎಸಗಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಛಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್, ಕಾರ್ಯದರ್ಶಿ ಮೋಹನ್ ಬಾಬು, ಖಜಾಂಚಿ ಕರಡಾಳು ಚಂದ್ರಶೇಖರ್, ಮುಖಂಡರಾದ ಈಚನೂರು ನರಸಿಂಹ ಮೂರ್ತಿ, ಮೋಹನ್ ಸಿಂಗ್, ವಸಂತಕುಮಾರ್, ಸೌಹಾರ್ದದ ಅಲ್ಲಾ ಬಕಾಶ್ ಮತ್ತು ಚನ್ನರಾಜ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
