ತುಮಕೂರು: ನಗರದ ಎನ್.ಆರ್. ಕಾಲೋನಿಯ ಪರಿಶಿಷ್ಟ ಜಾತಿ ಮಾದಿಗ ಜನಾಂಗಕ್ಕೆ ಸೇರಿರುವ ಸ.ನಂ 299/1 ರಲ್ಲಿನ ಸ್ಮಶಾನದ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿ, ನಮ್ಮ ಪೂರ್ವಜರ ಸಮಾಧಿಗಳನ್ನು ನೆಲಸಮಗೊಳಿಸಿ ಸಮಾಧಿಗಳ ಅಸ್ಥಿಪಂಜರಗಳನ್ನು ಅಕ್ರಮವಾಗಿ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ಜಾಗವನ್ನು ಸ್ಮಶಾನಕ್ಕೆ ಉಳಿಸಲು ಒತ್ತಾಯಿಸಿ ಎನ್.ಆರ್. ಕಾಲೋನಿ, ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ ನಿವಾಸಿಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಸ್ಮಶಾನಕ್ಕೆ ಮೀಸಲಾದ ಜಮೀನು ಹಾಗೂ ಅದಕ್ಕೆ ಹೊಂದಿಕೊಂಡಿರುವ ಖರಾಬು ಸರ್ಕಾರಿ ಜಮೀನಲ್ಲಿ ಅಕ್ರಮ ಲೇಔಟ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ ಹೋರಾಟಗಾರರು, ಜೆವಿ ಮೂಲ ಅಕ್ರಮ ಲೇಔಟ್ ಮಾಡಿರುವ ಕೋಮಾರಯ್ಯನ ಮಕ್ಕಳು ಹಾಗೂ ಚಿದಾನಂದ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸೃಷ್ಟಿಸಿರುವ ಸುಳ್ಳು ದಾಖಲೆಗಳನ್ನು ವಜಾಗೊಳಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.
ವಿವಾದದ ಹಿನ್ನೆಲೆ: ತುಮಕೂರು ನಗರ ವ್ಯಾಪ್ತಿಯ 19 ಮತ್ತು 20ನೇ ವಾರ್ಡ್ ಎನ್.ಆರ್ ಕಾಲೋನಿ ದೊಡ್ಡಟ್ಟ, ಪಿ.ಕೆ.ಎಸ್ ಕಾಲೋನಿ (ನಿರ್ವಾಣಿ ಲೇಔಟ್) ಮತ್ತು ಅಂಬೇಡ್ಕರ್ ನಗರ ವ್ಯಾಪ್ತಿಯಲ್ಲಿರುವ ಸ.ನಂ. 299/1ರ ಜಮೀನಿನ ವಿಸ್ತೀರ್ಣ 1925ನೇ ಕಂದಾಯ ಇಲಾಖೆಯ ಮೂಲ ದಾಖಲೆಯಾದ ಪ್ರಿಲಿಮಿನರಿ ರಿಜಿಸ್ಟರ್ ದಾಖಲೆಯಂತೆ ಒಟ್ಟು ವಿಸ್ತೀರ್ಣ 12.19 ಗುಂಟೆ ಇದ್ದು ಇದರಲ್ಲಿ ಪೂರ್ವಾಚಾರ 6 ಎಕರೆ 0.19 ಗುಂಟೆಜಾಗ ಉಳಿಕೆ 6 ಎಕರೆ ಮುಖ್ಯ ಜಮೀನು ಇರುತ್ತದೆ. ಸದರಿ ಜಮೀನು ಇಡೀ ಎನ್.ಆರ್. ಕಾಲೋನಿಯ ವಾಸಿಯಾಗಿದ್ದ ಮಾದಿಗ ಜನರಿಗೆ ಸೇರಿದ ದೊಡ್ಡಹನುಮಯ್ಯನವರಿಗೆ ಸೇರಿದಂತೆ ಪ್ರಿಲಿಮಿನರಿ ರಿಜಿಸ್ಟರ್ ದಾಖಲೆ ಕಲಂ-14ರಲ್ಲಿ ನಮೂದಾಗಿರುತ್ತದೆ. ದೊಡ್ಡಹನುಮಯ್ಯನವರ ಹಕ್ಕು ಪಾವತಿಯ ನಂತರ ಸ್ವಾಧೀನಾ ಅನುಭವದಲ್ಲಿದ್ದ ಇವರ ಒಬ್ಬನೇ ಮಗನಾದ ಸಂಜೀವಯ್ಯನವರ ಹೆಸರಿಗೆ ಪಾವತಿವಾರಸುದಾರರ ಹಕ್ಕು ಬದಲಾವಣೆಯಾಗಿರುತ್ತದೆ.
ಈ ಮಧ್ಯೆ ಸದರಿ ಖರಾಬು 6 ಎಕರೆ 0.19 ಗುಂಟೆ ಜಮೀನಲ್ಲಿ 1980 ಇಸವಿಯಿಂದಲೂ ವಾಸ ಮಾಡಲು ಜಾಗವಿಲ್ಲದೇ ಬೀದಿಯಲ್ಲಿದ್ದ ವಾಸ ಮಾಡುತ್ತಿದ್ದ ಎನ್ ಆರ್ ಕಾಲೋನಿಯ ವಸತಿರಹಿತ ಮಾದಿಗ ಕುಟುಂಬ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಲ್ಲದೆ ಶವ ಸಂಸ್ಕಾರಕ್ಕೆ ಇಲ್ಲಿರುವ ಸ್ಮಶಾನದ ಭೂಮಿಯನ್ನೇ ಆಶ್ರಯಿಸಿದ್ದಾರೆ. ಆದರೆ ಪ್ರಸಕ್ತ ಅತಿಕ್ರಮಣ ಪ್ರವೇಶಮಾಡಿ ಮಾದಿಗ ಜನಾಂಗದ ಪೂರ್ವಿಕರ ಶವ ಸಂಸ್ಕಾರದ ಸಮಾಧಿಗಳನ್ನು ನೆಲಸಮ ಗೊಳಿಸಿದ್ದು ಭೂಮಿ ಬಗೆದು ಅದರಲ್ಲಿದ್ದ ಅಸ್ಥಿಪಂಜರಗಳನ್ನು ಅಮಾನುಷವಾಗಿ ಹೊರಗೆಳೆದು ಚೀಲಗಳಿಗೆ ತುಂಬಿ ಟ್ರ್ಯಾಕ್ಟರ್ ಮೂಲಕ ಅದೃಶ್ಯಸ್ಥಳಕ್ಕೆ ಸಾಗಿಸಿ ನೇರವಾಗಿ ಚೆಲ್ಲಿದ್ದ ನೂರಾರು ವರ್ಷಗಳ ಬೃಹತ್ಗಾತ್ರದ ಮರಗಳನ್ನು ನೆಲಕ್ಕುರುಳಿಸಿ ಸಾಕ್ಷಿ ನಾಶಗೊಳಿಸಿರುತ್ತಾರೆ. ಈ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಜಮೀನಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಸೃಷ್ಟಿಸಿರುವ ದಾಖಲೆಗಳಾದ ಮ್ಯೂಟೇಷನ್ರೆಕಾರ್ಡ್ ಹಾಗೂ ಆರ್ ಟಿಸಿಗಳಂತಹ ದಾಖಲೆಗಳನ್ನು ವಜಾಗೊಳಿಸಿ, ದಲಿತ ಸಮುದಾಯದ ಸ್ಮಶಾನಕ್ಕೆ ಜಮೀನು ಉಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಪ್ರತ್ಯಕ್ಷಯಿಂದ ಜಿಲ್ಲಾಧಿಕಾರಿಗಳು ಜಂಟಿ ಸರ್ವೇ ನಡೆಸಿ ಸರಿಪಡಿಸಲಾಗುವುದು ತಿಳಿಸಿದರು. ಪ್ರಗತಿಪರ ಚಿಂತಕ ಕೆ.ದೊರೈರಾಜ್, ನಗರ ಸಭೆ ಮಾಜಿ ಉಪಾಧ್ಯಕ್ಷ ವಾಲ್ತೇರ್ ಡಯಾಸ್, ನಗರಪಾಲಿಕೆ ಮಾಜಿ ಉಪ ಮೇಯರ್ ರೂಪಶ್ರೀ ಶಶಿಕುಮಾರ್, ಮಾಜಿ ಸದಸ್ಯರಾದ ಹೆಚ್.ಆರ್. ಹನುಮಂತ ರಾಯಪ್ಪ, ನರಸಿಂಹಯ್ಯ, ಶ್ರೀನಿವಾಸ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಾರಾಯಣಮೂರ್ತಿ, ಕೋಲಗೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ. ನರಸಿಂಹಮೂರ್ತಿ, ಮುಖಂಡರಾದ ಜಯಮೂರ್ತಿ, ಕಿರಣ್, ಡಿಎಸ್ಎಸ್ ನರಸಿಂಹಯ್ಯ, ನರಸಿಂಹರಾಜು, ಜಿ. ವೆಂಕಟೇಶ್, ಜಯಮೂರ್ತಿ, ಬಿ.ಪಿ.ಅಂಜನಮೂರ್ತಿ, ತೊಟ್ಟಲಯ್ಯ, ಕಬೀರ್ ರಫು, ಚಂದ್ರಯ್ಯ, ಕಿಶೋರ್, ಮೋಹನ್ಕುಮಾರ್, ಗಂಗಾಧರ್, ಎನ್. ರಾಜಣ್ಣ, ರಾಮಯ್ಯ, ಗೋಪಾಲ್, ಮೋಹನ್, ಯೋಗೇಶ್, ಹನುಮಂತರಾಯ, ಶಾಂತಣ್ಣ, ಶ್ರೀನಿವಾಸ್, ಚಿಕ್ಕಹನುಮಂತಯ್ಯ, ಅನ್ನಪೂರ್ಣಮ್ಮ, ನಾಗಮ್ಮ, ಇಂದಿರಮ್ಮ, ಗಂಗಹನುಮಮ್ಮ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಇದಕ್ಕೂ ಮೊದಲು ಉಪವಿಭಾಗಾಧಿಕಾರಿ ನಾಡದಾಜಾವ್ಜಾದ್ ಅವರು ವಿವಾದಿತ ಜಾಗಕ್ಕೆ ಭೇಟಿ ನೀಡಿ ನಿವಾಸಿಗಳ ಅಹವಾಲು ಆಲಿಸಿದರು.
ದಲಿತ ಸಮುದಾಯಕ್ಕೆ ಸೇರಿದ ಸ್ಮಶಾನ ಭೂಮಿ ಒತ್ತುವರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಎನ್.ಆರ್.ಕಾಲೋನಿ ಅಂಬೇಡ್ಕರ್ ನಗರ ನಿವಾಸಿಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಸ್ಮಶಾನ ಜಾಗ ಒತ್ತುವರಿಯಿಲ್ಲ, ಜಂಟಿ ಸರ್ವೇ ತೀರ್ಮಾನಕ್ಕೆ ಬದ್ಧ:
ಆರೋಪದ ಕುರಿತು ಪ್ರತಿಕ್ರಿಯಿಸಿರುವ ಜೆವಿ ಮೂಲಕ್ ಲೇಔಟ್ ನಿರ್ಮಿಸಿರುವ ಸೂರ್ತಿ ಚಿದಾನಂದ್ ಅವರು, ನಾವು ಯಾವುದೇ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಲ್ಲ. ಸಂಜೀವಯ್ಯ ಎಂಬುವರ ಪಿತ್ರಾರ್ಜಿತ ಆಸ್ತಿಯಲ್ಲಿ 60ರ ದಶಕದಲ್ಲಿ ಕೋಮಾರಯ್ಯ ಅವರು 10 ಎಕರೆ 15 ಗುಂಟೆ ಹಾಗೂ 2 ಎಕರೆ 2 ಗುಂಟೆ ಜಾಗವನ್ನು ಖರೀದಿಸಿದ್ದರು. ಇದರ ಪಕ್ಕ ಸ.ನಂ 300-304ರ ನಗರಸಭೆಗೆ ಸೇರಿದ ಜಾಗದಲ್ಲಿ ಹರಿಜನರ ಸ್ಮಶಾನ ನಿರ್ಮಿಸಿದ್ದು, ಇದಕ್ಕೆ ಹೊಂದಿಕೊಂಡಂತೆ ಕೋಮಾರಯ್ಯ ಅವರಿಗೆ ಸೇರಿದ ಜಾಗದಲ್ಲಿ ಕೆಲವರು ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ಇದನ್ನು ಕೋಮಾರಯ್ಯ ಮಕ್ಕಳ ನ್ಯಾಯಾಲಯದಲ್ಲಿ ಪ್ರಶ್ನಿಸಿ ದಾವೆ ಹೂಡಿದ್ದು, ಉಳಿದಂತೆ 5 ಎಕರೆಯನ್ನು ಜೆವಿ ಮೂಲಕ ವಸತಿ ಬಡಾವಣೆಯಾಗಿ ಅಭಿವೃದ್ಧಿಪಡಿಸಿದ್ದು, ಗಿಡಗಂಟೆಗಳು ಬೆಳೆದಿದ್ದ ಜಾಗವನ್ನು ಕೋಮಾರಯ್ಯ ಅವರ ಮಕ್ಕಳು ವಿಭಾಗತುಂಡುಗಳ ಸೇರುವ ಕಾರಣಕ್ಕೆ ಸ್ವಚ್ಛಗೊಳಿಸಲು ಮುಂದಾದಾಗ ವಿವಾದ ತಲೊಡೋರಿದೆ. ಇದರಲ್ಲಿ ನನ್ನ ಪಾತ್ರವಿಲ್ಲದಿದ್ದರೂ ಅನಗತ್ಯ ತಂಟೆಸಂಚುಧ ಮೂಲಕ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಸಂಬಂಧ ಜಂಟಿ ಸರ್ವೇ ನಡೆಸುವುದಾಗಿ ತಿಳಿಸಿದ್ದು, ಶೀಘ್ರ ಜಂಟಿ ಸರ್ವೇ ನಡೆಸಿ ಯಾರಿಗೂ ಅನ್ಯಾಯವಾಗದಂತೆ ನ್ಯಾಯ ತೀರ್ಮಾನ ಮಾಡಿಸಬೇಕು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
