ತುಮಕೂರು: ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಜಮೀನು ನೋಂದಣಿ ಮಾಡಿದ ಆರೋಪದ ಮೇಲೆ ಹುಲಿಯೂರು ದುರ್ಗ ಉಪ ನೋಂದಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ರಾಜೇಶ್ ಒಳಗೊಂಡಂತೆ ಎಂಟು ಮಂದಿಯ ವಿರುದ್ಧ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜೇಶ್ ವಿರುದ್ಧ ಇದು 5ನೇ ಪ್ರಕರಣವಾಗಿದ್ದು, ಏಪ್ರಿಲ್ನಲ್ಲಿ ಚೇಳೂರು ಮತ್ತು ಶಿರಾ ಪೊಲೀಸ್ ಠಾಣೆ, ಆ.12 ರಂದು ಹುಲಿಯೂರುದುರ್ಗ ಠಾಣೆಯಲ್ಲಿ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ. ಹತ್ತಾರು ಜನ ರೈತರಿಗೆ ವಂಚಿಸಿದ ಆರೋಪ ಈತನ ವಿರುದ್ಧ ಕೇಳಿಬಂದಿದೆ.
ಉಪ ನೋಂದಣಾಧಿಕಾರಿ ರಜೆಯ ಮೇಲೆ ತೆರಳಿದಾಗ ರಾಜೇಶ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ಒಬ್ಬರ ಹೆಸರಿನಲ್ಲಿ ಜಮೀನನ್ನು ಮತ್ತೊಬ್ಬರ ಹೆಸರಿಗೆ ನೋಂದಣಿ ಮಾಡಿಕೊಡುತ್ತಿದ್ದರು. ಇದಕ್ಕಾಗಿ ಹಣ ಪಡೆಯುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗುಬ್ಬಿ ತಾಲೂಕಿನ ಕುನ್ನಾಲ ಗ್ರಾಮದ ಅಲ್ತಾಫ್ ಉಸೇನ್ ಎಂಬುವರು ಕೆ.ರಾಜೇಶ್ ಅವರ ಕುಮ್ಮಕ್ಕಿನಿಂದ ತಾಂತ್ರಿಕ ಸಹಾಯ ಪಡೆದು ನಮಗೆ ಪಿತ್ರಾರ್ಜಿತವಾಗಿ ಬಂದಿದ್ದ ಜಮೀನನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಹುಲಿಯೂರುದುರ್ಗ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಮಹಾಂತೇಶ್ ಕಾವೇರಿ ತಂತ್ರಾಂಶದಲ್ಲಿ ನಕಲಿ ದಾಖಲೆ ಅಪ್ ಲೋಡ್ ಮಾಡಿ, ಕಾನೂನು ಬಾಹಿರವಾಗಿ ಖಾತೆ, ಪಹಣಿ ಮಾಡಿಕೊಟ್ಟಿದ್ದಾರೆಂದು ಕುನ್ನಾಲದ ಮೊಹಮ್ಮದ್ ಅಜರುದ್ದೀನ್ ಎಂಬುವರು ಸಿ.ಎಸ್.ಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಜಮೀನಿಗೂ, ಕ್ರಯಪತ್ರದಲ್ಲಿರುವ ಖರೀದಿ ದಾರರಿಗೂ, ಮಾರಾಟಗಾರರಿಗೂ ಸಂಬಂಧವೇ ಇಲ್ಲ. ನಕಲಿ ದಾಖಲೆ, ಗುರುತಿನ ಚೀಟಿ ಸೃಷ್ಟಿಸಿ, ಕ್ರಯಪತ್ರ ನೋಂದಣಿ ಮಾಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಜರುದ್ದೀನ್ ದೂರು ಆಧರಿಸಿ ಅಲ್ತಾಫ್, ರಾಜೇಶ್, ರಂಗಸ್ವಾಮಿ, ಜಾವಿದ್ ಖಾನ್, ವಹೀದ್ ಉಲ್ಲಾಖಾನ್, ಅಬ್ದುಲ್ ಸಮೀರ್, ಖಬೀರ್, ಮಹಾಂತೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಜೇಶ್ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ. ಎಲ್ಲಾ ಕಡೆಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಬಗ್ಗೆ ಅನ್ಯಾಯಕ್ಕೆ ಒಳಗಾದವರು ದೂರು ನೀಡಿದ್ದಾರೆ. ತನಿಖೆಯ ನಂತರ ಮತ್ತಷ್ಟು ವಿವರಗಳು ಲಭ್ಯವಾಗಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
