ಬೆಂಗಳೂರು: ನೈಸ್ ರಸ್ತೆ (NICE Road) ಟೋಲ್ ಸಂಗ್ರಹದ ಕುರಿತಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಇದೀಗ ಟೋಲ್ ಪ್ಲಾಜಾಗಳಲ್ಲಿ ತೀವ್ರ ಗೊಂದಲ ಹಾಗೂ ವಾಗ್ವಾದಗಳು ಸೃಷ್ಟಿಯಾಗಿವೆ. ಸಾರ್ವಜನಿಕರು ಟೋಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದು, ಇದರಿಂದ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ನಿತ್ಯ ಜಟಾಪಟಿ ನಡೆಯುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ‘ಯಾರೂ ಟೋಲ್ ಕಟ್ಟಬೇಡಿ’ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದರು. ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ವಾಹನ ಸವಾರರು ನೈಸ್ ರಸ್ತೆಯಲ್ಲಿ ಟೋಲ್ ಪಾವತಿಸಲು ನಿರಾಕರಿಸುತ್ತಿದ್ದಾರೆ. “ಟೋಲ್ ಅವಧಿ ಮುಗಿದಿದೆ, ನ್ಯಾಯಾಲಯವೇ ಅಕ್ರಮ ಎಂದು ಹೇಳಿದೆ, ಹಾಗಾಗಿ ನಾವು ಟೋಲ್ ಕಟ್ಟುವುದಿಲ್ಲ” ಎಂದು ಸವಾರರು ವಾದಿಸುತ್ತಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ “ಟೋಲ್ ಕಟ್ಟಬೇಡಿ ಎಂದು ಕೋರ್ಟ್ ಯಾವುದೇ ಆದೇಶ ನೀಡಿಲ್ಲ” ಎಂದು ಟೋಲ್ ಸಿಬ್ಬಂದಿ ಹೇಳುತ್ತಿರುವುದರಿಂದ ಪ್ರತಿದಿನ ಮಾತಿನ ಚಕಮಕಿ, ಗಲಾಟೆಗಳು ನಡೆಯುತ್ತಿವೆ.
ಕುಮಾರಸ್ವಾಮಿಯವರ ಹೇಳಿಕೆಗೆ ರೈತ ಸಂಘಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ. ಈ ಬಗ್ಗೆ ಮಾತನಾಡಿರುವ ಜಮೀನು ಕಳೆದುಕೊಂಡ ರೈತ ಹಾಗೂ ಬಿಜೆಪಿ ಮುಖಂಡ ರುದ್ರೇಶ್, “2003ರಿಂದಲೂ ನಾವು ಹೋರಾಟ ಮಾಡುತ್ತಿದ್ದೇವೆ. ಜಮೀನು ನೀಡಿದ ರೈತರಿಗೆ ಇನ್ನೂ ನಿವೇಶನ ಸಿಕ್ಕಿಲ್ಲ. ನಮ್ಮ ಜಮೀನು ಕಳೆದುಕೊಂಡು, ನಾವೇ ಟೋಲ್ ಕಟ್ಟಿ ಓಡಾಡುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ” ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ವಿವಾದ ದಿನೇ ದಿನೇ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ನೈಸ್ ಆಡಳಿತ ಮಂಡಳಿಯು ಸಾರ್ವಜನಿಕ ಪ್ರಕಟಣೆಯೊಂದನ್ನು ಹೊರಡಿಸಿದೆ. “ಹೈಕೋರ್ಟ್ ಟೋಲ್ ಸಂಗ್ರಹ ಕಾನೂನುಬಾಹಿರ ಎಂದು ಎಲ್ಲೂ ಆದೇಶ ನೀಡಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಟೋಲ್ ಸಿಬ್ಬಂದಿಗೆ ಕಿರುಕುಳ ನೀಡುವುದು ಹಾಗೂ ಟೋಲ್ ಪಾವತಿಸದೇ ಬಲವಂತವಾಗಿ ವಾಹನ ಚಲಾಯಿಸುವುದು ಕಾನೂನುಬಾಹಿರ ಕೃತ್ಯವಾಗಿದೆ. ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಒಂದೆಡೆ ಸಚಿವರ ಹೇಳಿಕೆ, ಮತ್ತೊಂದೆಡೆ ರೈತರ ಆಕ್ರೋಶ ಹಾಗೂ ನೈಸ್ ಸಂಸ್ಥೆಯ ಕಾನೂನು ಕ್ರಮದ ಎಚ್ಚರಿಕೆ. ಇವೆಲ್ಲದರ ನಡುವೆ ಸಾಮಾನ್ಯ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ಪರದಾಡುವಂತಾಗಿದೆ. ಜನರಲ್ಲಿ ಮೂಡಿರುವ ಈ ಗೊಂದಲಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟವರು ಶೀಘ್ರವೇ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿ, ಈ ವಿವಾದಕ್ಕೆ ಒಂದು ಸುಖಾಂತ್ಯ ಹಾಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
