ಹೊಳೆನರಸೀಪುರ: ಸ್ಥಳೀಯ ಪುರಸಭೆಯಲ್ಲಿ ಶಾಸಕರ ಅಣತಿಯಂತೆ ಕೆಲಸ ಕಾರ್ಯಗಳು ನಡೆಯುವುದು ಹಾಗೂ ಅವರೇ ಸಭೆಯ ಅಜೆಂಡಾಗಳನ್ನು ನಿರ್ಧರಿಸುವುದು ಹೊಳೆನರಸೀಪುರ ಸಾರ್ವಜನಿಕರಿಗೆ ತಿಳಿದಿರುವ ವಿಷಯವೇ ಆಗಿದೆ. ಯಾರೇ ಅಧ್ಯಕ್ಷರಾಗಿದ್ದರೂ ಶಾಸಕರು ನಿಗದಿಪಡಿಸಿದ ದಿನ ಮತ್ತು ವಿಷಯಗಳ ಮೇಲಷ್ಟೇ ಚರ್ಚೆ ನಡೆದು, ಅವರ ಇಷ್ಟದಂತೆ ತೀರ್ಮಾನಗಳು ಹೊರಬೀಳುತ್ತಿದ್ದವು.
ಆದರೆ, ಪುರಸಭೆಯ ಆಡಳಿತಾವಧಿ ಮುಗಿದು ಉಪವಿಭಾಗಾಧಿಕಾರಿಗಳು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬಜೆಟ್ ಸಭೆಯನ್ನು ಹೊರತುಪಡಿಸಿ ಯಾವುದೇ ಸಾಮಾನ್ಯ ಸಭೆಗಳು ನಡೆದಿರಲಿಲ್ಲ. ಪಟ್ಟಣದ ಅಭಿವೃದ್ಧಿ ಹಾಗೂ ಹಲವು ಸಮಸ್ಯೆಗಳ ಕುರಿತು ಸಭೆ ಕರೆಯುವಂತೆ ಸಾರ್ವಜನಿಕರು ಮತ್ತು ಮುಖಂಡರು ನಿರಂತರ ಪ್ರಯತ್ನ ನಡೆಸಿದರೂ ಶಾಸಕರು ಲಭ್ಯವಿರಲಿಲ್ಲ ಎನ್ನಲಾಗಿದೆ.
ಲೋಕಾಯುಕ್ತ ದೂರು ಮತ್ತು ರಸ್ತೆ ತೆರವು ನಿರ್ಣಯ:
ತಾಲೂಕು ಕಚೇರಿಯ ಪೂರ್ವ ಭಾಗದ ಸಾರ್ವಜನಿಕ ರಸ್ತೆಯನ್ನು ನಿಯಮ ಮೀರಿ ಮುಚ್ಚಿರುವ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಶಾಸಕರ ಆಶಯದಂತೆ ಜಿಲ್ಲಾಧಿಕಾರಿಗಳ ಯಾವುದೇ ಪೂರ್ವ ಅನುಮೋದನೆ ಪಡೆಯದೇ ಈ ರಸ್ತೆಯನ್ನು ಮುಚ್ಚಲಾಗಿತ್ತು ಎಂಬ ಆರೋಪವಿದೆ. ಆದರೆ, ಲೋಕಾಯುಕ್ತದ ಸೂಚನೆಗೆ ಅಧಿಕೃತ ಉತ್ತರ ನೀಡಬೇಕಾದ ಅನಿವಾರ್ಯತೆ ಎದುರಾದಾಗ, ಆಡಳಿತಾಧಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ರಸ್ತೆ ತೆರವುಗೊಳಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.
ಅಧಿಕಾರಿಯ ವರ್ಗಾವಣೆಗೆ ಶಾಸಕರ ಮುನಿಸು ಕಾರಣವೇ?
ಲೋಕಾಯುಕ್ತದ ಕಾನೂನು ಕ್ರಮದಿಂದ ಬಚಾವಾಗಲು ರಸ್ತೆ ತೆರವು ನಿರ್ಣಯ ಕೈಗೊಂಡಿದ್ದು ಶಾಸಕರ ಮುನಿಸಿಗೆ ಕಾರಣವಾಯಿತು ಎನ್ನಲಾಗಿದೆ. ಪರಿಣಾಮವಾಗಿ, ನಿಯಮಾನುಸಾರ ಕಾರ್ಯನಿರ್ವಹಿಸಿದ ಉಪವಿಭಾಗಾಧಿಕಾರಿಗಳನ್ನು (ಆಡಳಿತಾಧಿಕಾರಿ) ತಕ್ಷಣವೇ ಬದಲಾವಣೆ ಮಾಡಿಸುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಾರ್ವಜನಿಕರ ಪ್ರಶ್ನೆ:
ಶಾಸಕರ ಮಾತು ಕೇಳಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ರಸ್ತೆ ಮುಚ್ಚಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಏಕೆ? ಶಾಸಕರು ಹೇಳಿದಂತೆ ಕೇಳಿದರೆ ಯಾವುದೇ ತೊಂದರೆಯಿಲ್ಲ, ನಿಯಮ ಪಾಲಿಸಿದರೆ ಬದಲಾವಣೆ ಶಿಕ್ಷೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ತಾಲೂಕು ಕಚೇರಿಯ ಮುಂಭಾಗದ ರಸ್ತೆಯನ್ನು ಅಕ್ರಮವಾಗಿ ಮುಚ್ಚಿದ್ದನ್ನು ತೆರವುಗೊಳಿಸಲು ಧೈರ್ಯ ತೋರಿದ ಅಧಿಕಾರಿಯ ಮೇಲೆ ‘ವಕ್ರದೃಷ್ಟಿ’ ಬಿದ್ದಿರುವುದು ಈಗ ಹೊಳೆನರಸೀಪುರ ಪಟ್ಟಣದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
