ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವುದಕ್ಕೆ ಸಂಬಂಧಿಸಿದಂತೆ ಎದ್ದಿರುವ ಚರ್ಚೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರಕ್ಕೆ ಅದಾನಿ ಕೇವಲ ಒಬ್ಬ “ಸರ್ಕಾರಿ ಗುತ್ತಿಗೆದಾರ” ಅಷ್ಟೇ ಎಂದಿದ್ದಾರೆ.
ಅದಾನಿ ಅವರ ಕುರಿತು ಪಕ್ಷದ ನಿಲುವು ಏನೇ ಇದ್ದರೂ, ಅವರು ಗುತ್ತಿಗೆದಾರರಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಚಿತ್ತಾಪುರದಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆಯನ್ನು ಅದಾನಿ ಸಂಸ್ಥೆ ಖರೀದಿಸಿದ್ದು, ಅವರು ಕಾನೂನುಬದ್ಧವಾಗಿ ಉದ್ಯಮ ನಡೆಸಲು ಹಾಗೂ ಉತ್ಪಾದನೆ ಮಾಡಲು ಸರ್ಕಾರದ ಯಾವುದೇ ಆಕ್ಷೇಪಣೆಯಿಲ್ಲ. ಹೀಗಾಗಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಖರ್ಗೆ ಹೇಳಿದ್ದಾರೆ.
ರಾಜ್ಯ ಸರ್ಕಾರದ ಎರಡು ಪ್ರಮುಖ ಯೋಜನೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಸಂಸ್ಥೆಯು ಎಲ್–1 (ಅತಿ ಕಡಿಮೆ ದರ ನಮೂದಿಸಿದವರು) ಆಗಿ ಹೊರಹೊಮ್ಮಿದೆ. ಈ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಬಹಳ ಮುಖ್ಯವಾಗಿವೆ. ಟೆಂಡರ್ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿ ನಡೆದಿದ್ದು, ಇದರ ಮೇಲೆ ಸರ್ಕಾರ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಎಲ್–1 ಆಗಿರುವ ಹಿನ್ನೆಲೆಯಲ್ಲಿ ಅವರು ಸೌಜನ್ಯಕ್ಕಾಗಿ ಭೇಟಿಯಾಗಿರಬಹುದು ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರವು ಅಂಬಾನಿ ಹಾಗೂ ಅದಾನಿಯವರ ಗುಲಾಮ ಎಂಬ ತಮ್ಮ ಹಿಂದಿನ ರಾಜಕೀಯ ಅಭಿಪ್ರಾಯಕ್ಕೆ ಈಗಲೂ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ ಖರ್ಗೆ, ಆದಾಗ್ಯೂ ಯಾರೇ ಆಗಲಿ ನ್ಯಾಯಯುತವಾಗಿ ಟೆಂಡರ್ ಪಡೆದಾಗ ಕೆಲಸ ಮಾಡಿಸುವುದು ಸರ್ಕಾರದ ಕರ್ತವ್ಯ. ಅದು ಅಂಬಾನಿ, ಅದಾನಿ ಅಥವಾ ಇನ್ನಾರೇ ಆಗಿರಲಿ, ರಾಜ್ಯದ ಕೆಲಸಗಳು ಸುಗಮವಾಗಿ ನಡೆಯುವುದು ನಮಗೆ ಮುಖ್ಯ. ಒಂದು ವೇಳೆ ಪಾರದರ್ಶಕತೆ ಇಲ್ಲದೆ ಬೇರೆಯವರಿಗೆ ಟೆಂಡರ್ ನೀಡಿದ್ದರೆ ಅದನ್ನೇ ಹಗರಣ ಎನ್ನಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
