ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಗಸ್ತು ತಂಡದ ಸಮಯೋಚಿತ ಕಾರ್ಯದಿಂದಾಗಿ ಹಠಾತ್ ಹೃದಯಾಘಾತದಿಂದ (Cardiac Arrest) ಬಳಲುತ್ತಿದ್ದ 34 ವರ್ಷದ ವ್ಯಕ್ತಿಯೊಬ್ಬರ ಜೀವ ಉಳಿದಿರುವ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ.
ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ನಿಶಾಮಕ ಠಾಣೆ ಬಳಿ ಈ ಘಟನೆ ಸಂಭವಿಸಿದೆ. 34 ವರ್ಷದ ರವಿ ಎಂಬುವವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅವರಿಗೆ ಹಠಾತ್ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಅವರು ಬೈಕನ್ನು ರಸ್ತೆ ಪಕ್ಕ ನಿಲ್ಲಿಸಿ ಕೆಳಗೆ ಕುಸಿದು ಬಿದ್ದಿದ್ದಾರೆ.
ಅದೇ ಸಮಯದಲ್ಲಿ ಆ ಮಾರ್ಗವಾಗಿ ಹೊಯ್ಸಳ-88 ವಾಹನದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ರವಿ ಕುಸಿದು ಬೀಳುತ್ತಿರುವುದನ್ನು ಗಮನಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಹಾಯಕ ಸಬ್–ಇನ್ಸ್‌ಪೆಕ್ಟರ್ (ASI) ಸಚ್ಚಿದಾನಂದಮೂರ್ತಿ ಮತ್ತು ಹೆಡ್ ಕಾನ್’ಸ್ಟೆಬಲ್ ಬಸವರಾಜು ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸಮಯ ಪ್ರಜ್ಞೆ ಮೆರೆದು ರವಿಗೆ ಸಿಪಿಆರ್ (CPR) ಚಿಕಿತ್ಸೆ ನೀಡಿದ್ದಾರೆ.
ಪೊಲೀಸರ ಈ ಸಕಾಲಿಕ ಹಾಗೂ ತ್ವರಿತ ನೆರವಿನಿಂದ ರವಿ ಅವರ ಆರೋಗ್ಯ ಸ್ಥಿರಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಪತ್ಬಾಂಧವರಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ಸಾಹಸ ಹಾಗೂ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
