ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಆಕ್ಷನ್ ದೃಶ್ಯಗಳು ಸದ್ಯ ಭಾರೀ ಸಂಚಲನ ಸೃಷ್ಟಿಸುತ್ತಿವೆ. ಅತ್ಯಂತ ಅದ್ಧೂರಿ ಹಾಗೂ ವಿಭಿನ್ನ ಆಕ್ಷನ್ ದೃಶ್ಯಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಹಾಲಿವುಡ್ ನ ಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ (JJ Perry) ಆಕ್ಷನ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ KVN ಪ್ರೊಡಕ್ಷನ್ಸ್ ಬಿಡುಗಡೆ ಮಾಡಿರುವ ಮೇಕಿಂಗ್ ವಿಡಿಯೋವೊಂದರಲ್ಲಿ ಜೆಜೆ ಪೆರ್ರಿ ಅವರು ನಟ ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ ದಾಸ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸಿನಿಮಾದ ಆಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಮಾತನಾಡಿರುವ ಜೆಜೆ ಪೆರ್ರಿ, ಸಾಮಾನ್ಯವಾಗಿ ಕೆಲವು ನಿರ್ದೇಶಕರು ಆಕ್ಷನ್ ದೃಶ್ಯಗಳ ವಿಚಾರದಲ್ಲಿ ಹೆಚ್ಚು ತಲೆಹಾಕುವುದಿಲ್ಲ. ಆದರೆ ಗೀತೂ ಮೋಹನ್ ದಾಸ್ ಹಾಗಿರಲಿಲ್ಲ. ಅವರು ಪ್ರತಿಯೊಂದು ವಿಷಯದಲ್ಲೂ ನಮ್ಮೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ನಮಗೆ ಪೂರ್ಣ ಸ್ವಾತಂತ್ರ್ಯ ನೀಡುವುದರ ಜೊತೆಗೆ, ಆಕ್ಷನ್ ದೃಶ್ಯಗಳು ಹೇಗಿರಬೇಕು ಎಂಬುದರ ಸ್ಪಷ್ಟ ದಿಕ್ಕನ್ನು ತೋರಿಸಿದರು. ಯಶ್ ಮತ್ತು ಗೀತೂ ಒಟ್ಟಾಗಿ ಒಂದು ಅತ್ಯುತ್ತಮ ತಂಡವಾಗಿ ಕೆಲಸ ಮಾಡಿದರು. ಅವರೊಂದಿಗೆ ಕೆಲಸ ಮಾಡಿದ್ದು ನನಗೊಂದು ಅದ್ಭುತ ಅನುಭವ ಎಂದಿದ್ದಾರೆ.
ಯಶ್ ಅವರ ಬಗ್ಗೆ ವಿಶೇಷವಾಗಿ ಮಾತನಾಡಿದ ಅವರು, “ಯಶ್ ಕೇವಲ ಒಬ್ಬ ದೊಡ್ಡ ಮೂವಿ ಸ್ಟಾರ್ ಮಾತ್ರವಲ್ಲ, ಸಿನಿಮಾ ಬಗ್ಗೆ ಅಪಾರ ಆಸಕ್ತಿ ಮತ್ತು ಪ್ರತಿಭೆ ಇರುವ ವ್ಯಕ್ತಿ. ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ, ಹಲವು ಹೊಸ ಹೊಸ ಆಲೋಚನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ತುಂಬಾ ಸಮರ್ಪಣಾ ಭಾವದಿಂದ (Dedication) ಕೆಲಸ ಮಾಡುತ್ತಾರೆ. ಅವರ ನಡಿಗೆ ಮತ್ತು ನಿಲುವಿನಲ್ಲಿ ಒಂದು ವಿಶೇಷವಾದ ‘ಸ್ವಾಗ್’ (Swag) ಇದೆ. ಫೈಟ್ ಸೀನ್‌ಗಳಿಗಾಗಿ ಅವರು ತಮ್ಮನ್ನು ತಾವು ತಯಾರು ಮಾಡಿಕೊಳ್ಳುತ್ತಿದ್ದ ರೀತಿ ಅತ್ಯುತ್ತಮವಾಗಿತ್ತು. ಅವರಿಗೆ ಒಳ್ಳೆಯ ಮೈಕಟ್ಟು ಹಾಗೂ ಅಪಾರ ಶಕ್ತಿಯಿದೆ” ಎಂದು ಕೊಂಡಾಡಿದ್ದಾರೆ.
ಅಲ್ಲದೆ, ಸಿನಿಮಾದಲ್ಲಿನ ‘ಲೇಡೀಸ್ ಆಂಡ್ ಲೇಡೀಸ್’ ಫೈಟ್‌ನಲ್ಲಿ ಭಾಗವಹಿಸಿದ್ದ ವಿದೇಶಿ ಫೈಟರ್‌ಗಳು ಕೂಡ ಯಶ್ ಅವರ ಶ್ರಮ ಮತ್ತು ನಟನೆಯನ್ನು “ಯಶ್ ಆಸಮ್”, “ಯಶ್ ಸೂಪರ್” ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
