ಹಾಸನ: ಗ್ರಾಮ ಪಂಚಾಯತ್ ಚುನಾವಣೆಯ ಮೀಸಲು ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಮತ್ತೊಮ್ಮೆ ತೀವ್ರವಾಗಿ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಯವರ ದಬ್ಬಾಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಸರ್ಕಾರದ ಆಡಳಿತ ಯಂತ್ರದ ವಿರುದ್ಧವೂ ವಾಗ್ದಾಳಿ ನಡೆಸಿದರು.
ಗ್ರಾಮ ಪಂಚಾಯತ್ ಚುನಾವಣೆಗೆ ಮೀಸಲು ನಿಗದಿ ಮಾಡುವಾಗ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಗೆ ಯಾಕೆ ಪತ್ರ ಬರೆದರು? ಅವರಿಂದ ವರದಿ ಪಡೆದ ಬಳಿಕ ಮೀಸಲು ನಿಗದಿ ಬದಲಾವಣೆ ಮಾಡಿದ್ದು ಯಾಕೆ? ಬದಲಾವಣೆ ಮಾಡುವಾಗ ನಿರ್ದಿಷ್ಟ ಕಾರಣ ನೀಡಬೇಕಲ್ಲವೇ ಎಂದು ಹೆಚ್.ಡಿ. ರೇವಣ್ಣ ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಆರು ತಿಂಗಳುಗಳ ಕಾಲ ಅಪರ ಜಿಲ್ಲಾಧಿಕಾರಿ (ADC) ಇರಲಿಲ್ಲ. ಬಂದವರೂ ಕೂಡ ಕೇವಲ ಎರಡೇ ದಿನ ಅಥವಾ ಒಂದು ವಾರಕ್ಕೆ ರಜೆ ಹಾಕಿ ಹೋದರು. ಸಕಲೇಶಪುರ ಎಸಿ ಕೂಡ ಒಂದು ತಿಂಗಳು ಇರಲಿಲ್ಲ. ಹಲವು ಕಡೆಗಳಲ್ಲಿ ಒಂದೇ ಅಧಿಕಾರಿಗೆ ಎರಡು-ಮೂರು ಕಡೆಗಳಲ್ಲಿ ಚಾರ್ಜ್ ನೀಡಲಾಗಿದ್ದು, ಇದರಿಂದ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ದೂರಿದರು.
“ಅವರು ದಬ್ಬಾಳಿಕೆ ಮಾಡಲಿ, ಯಾವ ರೀತಿ ರಿಪೇರಿ ಮಾಡಬೇಕು ಎಂಬುದು ನಮಗೆ ಗೊತ್ತಿದೆ” ಎಂದು ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಮೀಸಲು ನಿಗದಿಯಾಗಿರುವ ದೃಢೀಕೃತ ಪ್ರತಿಯನ್ನು ಕೇಳಿದರೂ ಇನ್ನೂ ನೀಡ್ತಿಲ್ಲ. ಸೋಮವಾರದ (ಆಗಸ್ಟ್ 31) ಒಳಗೆ ಮೀಸಲು ಬದಲಾವಣೆ ಆಗದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ 7.35 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಕೇವಲ 14 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಬಿತ್ತಿದ ಬೆಳೆ ಬಹುತೇಕ ನಾಶವಾಗಿದ್ದು, ರಾಗಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬೇಲೂರು ಮತ್ತು ಆಲೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಯಾಕೆ ಸೇರಿಸಿಲ್ಲ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಕೇಳೋರಿಲ್ಲ, ಹೇಳೋರಿಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
