ಬೆಂಗಳೂರು: ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಸತಿಗೃಹವೊಂದರ (PG) ಏಳನೇ ಮಹಡಿಯಿಂದ ಜಿಗಿದು 23 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಯುವತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪ್ರಿಯಕರ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಮೃತ ಯುವತಿಯನ್ನು ಜನನಿ (23) ಎಂದು ಗುರುತಿಸಲಾಗಿದೆ. ಆಕೆ ವೈಟ್ ಫೀಲ್ಡ್ ನ ಇಸಿಸಿ (ECC) ರಸ್ತೆಯಲ್ಲಿರುವ ‘ರಾಧಾಕೃಷ್ಣ ಕೋ–ಲೈವ್ ಪಿಜಿ’ಯಲ್ಲಿ ವಾಸವಿದ್ದರು ಮತ್ತು ಕಳೆದ 8 ತಿಂಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಿಯಕರನನ್ನು ಪುದುಚೇರಿಯ ಲಾಜಿಸ್ಟಿಕ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾಣಿಕ್ಯವೇಲು (30) ಎಂದು ಗುರುತಿಸಲಾಗಿದೆ.
ಮೂಲತಃ ಪುದುಚೇರಿಯವರಾದ ಜನನಿ ಮತ್ತು ಮಾಣಿಕ್ಯವೇಲು ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜನನಿಯನ್ನು ಭೇಟಿಯಾಗಲು ಮಾಣಿಕ್ಯವೇಲು ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಭಾನುವಾರ ಮಧ್ಯಾಹ್ನ ಈ ಜೋಡಿ ಪಿಜಿ ಕಟ್ಟಡದ ಏಳನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಜಿಗಿದಿದ್ದಾರೆ. ಪರಿಣಾಮ ಜನನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತೀವ್ರವಾಗಿ ಗಾಯಗೊಂಡಿರುವ ಮಾಣಿಕ್ಯವೇಲು ಅವರನ್ನು ಸ್ಥಳೀಯರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜನನಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಈ ಜೋಡಿ ಇಂತಹ ತೀವ್ರ ನಿರ್ಧಾರ ಕೈಗೊಳ್ಳಲು ನಿಖರವಾದ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
