ಸರಗೂರು: ಪಟ್ಟಣದ ಎಂಡಿಡಿಸಿ ಬ್ಯಾಂಕ್ ಪಕ್ಕದಲ್ಲಿರುವ ವೀರಶೈವ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ದಡದಹಳ್ಳಿ ಡಿ.ಸಿ. ಮಹೇಶ್ ಹಾಗೂ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ. ಶಿವಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾಧಿಕಾರಿ ಹಾಗೂ ಸಂಘದ ಕಾರ್ಯದರ್ಶಿಗಳಾದ ಶಿವಕುಮಾರ್ ಮತ್ತು ಸ್ವಾಮಿ ಅವರು ಇಬ್ಬರನ್ನೂ ನಿರ್ದೇಶಕರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಿದರು.
ನಿಕಟಪೂರ್ವ ಅಧ್ಯಕ್ಷ ಡಿ.ಜಿ. ಶಿವರಾಜು ಮಾತನಾಡಿ, ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಹಾಗೂ ನೂತನ ಆಡಳಿತ ಮಂಡಳಿಯ ಒಗ್ಗಟ್ಟಿನ ಪ್ರಯತ್ನ ಅತ್ಯಗತ್ಯ ಎಂದರು. ಸದಸ್ಯರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಉತ್ತಮ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ನೂತನ ಅಧ್ಯಕ್ಷ ಡಿ.ಸಿ. ಮಹೇಶ್ ಕೃತಜ್ಞತೆ ಸಲ್ಲಿಸುತ್ತಾ, ತಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಸಂಘದ ಅಭಿವೃದ್ಧಿ ಹಾಗೂ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಚುನಾವಣೆಯಲ್ಲಿ ವಿವಿಧ ನಿರ್ದೇಶಕರಾಗಿ ಬಿದರಹಳ್ಳಿ ಮಾದಪ್ಪ, ಹಂಚೀಪುರ ಮಹದೇವಸ್ವಾಮಿ, ಹುಣಸಹಳ್ಳಿ ಚನ್ನಮಲ್ಲಪ್ಪ, ಶಿವಪುರ ಜಯಕುಮಾರ್, ಆನಗಟ್ಟಿ ಮಹದೇವಪ್ಪ, ಬಾಡಗ ವೀರಭದ್ರಪ್ಪ, ಹಂಚೀಪುರ ಕೆ.ಎಸ್. ಸುಧಾನಟರಾಜು, ಬಾಡಗ ರುದ್ರಮ್ಮ ಪುಟ್ಟಪ್ಪ ಮುಂತಾದವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕೆ.ಎಸ್. ವೀರಭದ್ರಪ್ಪ, ಮಾಜಿ ಅಧ್ಯಕ್ಷರಾದ ಡಿ.ಜಿ. ಶಿವರಾಜು, ಗಣಪತಿ, ಎಸ್.ಎನ್. ಪ್ರಕಾಶ್, ಎಲ್. ಶಿವಣ್ಣ ಹಾಗೂ ಸಮಾಜದ ಮುಖಂಡರಾದ ಶ್ರೀಕಂಠ ಸ್ವಾಮಿ, ನಟರಾಜು, ನಿಜಪ್ಪ, ಪುಟ್ಟಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
