ಗುಬ್ಬಿ: ಒಂದೇ ಸೂರಿನಡಿ ಸಾರ್ವಜನಿಕರ ಅರ್ಜಿಗೆ ಸ್ಥಳದಲ್ಲೇ ಉತ್ತರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿರುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಯಶಸ್ಸಿಗೆ ಪಟ್ಟಣದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಅವರು ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸೆ.5 ರಂದು ನಡೆಯುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಅವಶ್ಯ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಮೂಲಭೂತ ಸವಲತ್ತು ಜೊತೆಗೆ ಇಲಾಖಾವಾರು ಸ್ಟಾಲ್ ಮೂಲಕ ಅರ್ಜಿ ಸ್ವೀಕಾರ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನಾದ್ಯಂತ ಸಾರ್ವಜನಿಕರಿಗೆ ಕಾರ್ಯಕ್ರಮ ಕುರಿತು ಪ್ರಚಾರ ಕಾರ್ಯ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಮೂಲಕ ಜನರಿಗೆ ಆಂದೋಲನ ಬಗ್ಗೆ ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಶಾಸಕ ಎಸ್.ಆರ್. ಶ್ರೀನಿವಾಸ್ ಉಪಸ್ಥಿತರಿದ್ದು, ಅರ್ಜಿ ಆಹವಾಲು ಸ್ವೀಕರಿಸಲಿದ್ದಾರೆ. ಸ್ಥಳದಲ್ಲೇ ಅರ್ಜಿಗೆ ಉತ್ತರ ಸಿಗಲಿದೆ. ಇಲ್ಲವಾದಲ್ಲಿ ಮೂರು ಹಂತದಲ್ಲಿ ಅಂದರೆ ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಅರ್ಜಿ ಇತ್ಯರ್ಥಗೊಳಲಿದೆ ಎಂದರು.
ಸಾರ್ವಜನಿಕರು ಈ ಆಂದೋಲನಕ್ಕೆ ಬಂದು ತಮ್ಮ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಟೋಕನ್ ಪಡೆಯಬೇಕಿದೆ. ನಂತರ ಡಿಎಸಿ ಅವರ ನೇತೃತ್ವದ ಸಭೆಯಲ್ಲಿ ಅರ್ಜಿ ಬಗ್ಗೆ ಚರ್ಚೆ ಕೂಡ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ಬರದಿದ್ದಲ್ಲಿ ತಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಮೂರು ದಿನದಲ್ಲಿ ಉತ್ತರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ತುಮಕೂರು: ಗೊಲನ ಎಂಟರ್ ಪ್ರೈಸಸ್ ನಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ
ಈ ಸಂದರ್ಭದಲ್ಲಿ ತಹಸೀಲ್ದಾರ್ ಆರತಿ. ಬಿ., ತಾಪಂ ಇಒ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳಾ ದೇವಿ, ಬಿಇಒ ನಟರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪವಿತ್ರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್ ಗೌಡ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಪ್ರಜಾ ಸೇವೆ ಆಂದೋಲನದಲ್ಲಿ ಜನತೆ ಸಮಸ್ಯೆ ಬಗೆಹರಿಸಿಕೊಳ್ಳಿ; ಪ್ರಜಾ ಸೇವೆ ಆಂದೋಲನದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿರುತ್ತಾರೆ. ಜಿಲ್ಲೆಯಾದ್ಯಂತ ನಿರಂತರ ಈ ಪ್ರಜಾ ಸೇವೆ ಆಂದೋಲನ ಪ್ರತಿ ಶನಿವಾರ ಸ್ಥಳೀಯ ಶಾಸಕರ ನೇತೃತ್ವದಲ್ಲಿ ನಡೆಯಲಿದೆ. ಹೋಬಳಿ ಮಟ್ಟದಲ್ಲಿ ಕೂಡ ನಡೆಯುವ ಈ ಕಾರ್ಯಕ್ರಮ ಬಳಸಿಕೊಂಡು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು, ಕಾರ್ಯಕ್ರಮಗಳು ಅನುಷ್ಠಾನದಲ್ಲಿ ವಿಳಂಬ ಆಗದಂತೆ ಕ್ರಮ ಕೈಗೊಳ್ಳುವ ಈ ಸಾರ್ವಜನಿಕ ಆಂದೋಲನ ಕಾರ್ಯಕ್ರಮದಲ್ಲಿ ಆಧಾರ್ ಕಾರ್ಡ್ ಸಮಸ್ಯೆ ಬಗೆಹರಿಸಿಕೊಳ್ಳಲು ವಿಶೇಷ ಮೊಬೈಲ್ ಆಧಾರ್ ಕೌಂಟರ್ ತೆರೆಯಲಾಗುತ್ತದೆ. ಪ್ರಜಾ ಸೇವೆ ಆಂದೋಲನ ಯಶಸ್ಸಿ ಗೆ ಸಕಲ ಸಿದ್ಧತೆಯನ್ನು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಮಾಡಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
-ಶುಭ ಕಲ್ಯಾಣ್, ಜಿಲ್ಲಾಧಿಕಾರಿಗಳು.
