ಕೊರಟಗೆರೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಗೌತಮ ಬುದ್ಧ ಹಾಗೂ ವಿಶ್ವಗುರು ಬಸವಣ್ಣನವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೆ.ಆರ್.ಪೇಟೆ ತಾಲ್ಲೂಕಿನ ದೊಡ್ಡಯಾಚೆನಹಳ್ಳಿಯ ವೇದಮೂರ್ತಿ ಎಂಬ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಕೊರಟಗೆರೆ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಆರೋಪಿಯು ತನ್ನ ಸಾಮಾಜಿಕ ಜಾಲತಾಣದ ವೀಡಿಯೊಗಳಲ್ಲಿ ದಲಿತ ಸಮುದಾಯ, ಸಂವಿಧಾನ ಹಾಗೂ ಮೀಸಲಾತಿಯ ಕುರಿತು ಅತ್ಯಂತ ಆಕ್ಷೇಪಾರ್ಹ ಪದಗಳನ್ನು ಬಳಸಿ ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಯತ್ನ ನಡೆಸಿದ್ದಾನೆ ಎಂದು ಹಿರಿಯ ಹೋರಾಟಗಾರ ದಾಡಿ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
- ಬುದ್ಧ, ಬಸವ, ಅಂಬೇಡ್ಕರ್ ಕುರಿತು ಅವಹೇಳನ ನಡೆಸಿರುವ ವೇದಮೂರ್ತಿಯನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು.
- ಆರೋಪಿಗೆ ಕಾನೂನಾತ್ಮಕವಾಗಿ ಜೀವಾವಧಿ ಶಿಕ್ಷೆ ವಿಧಿಸಬೇಕು.
- ಅವಹೇಳನಕಾರಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಸುವ ವ್ಯಕ್ತಿ ಹಾಗೂ ಗುಂಪುಗಳನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
- ರಾಷ್ಟ್ರಮಟ್ಟದಲ್ಲಿ ಮೀಸಲಾತಿ ವಿರೋಧಿ ನೀತಿಗಳನ್ನು ಅಥವಾ ಮೀಸಲಾತಿ ರದ್ಧತಿಗೆ ಬೆಂಬಲಿಸುವ ವ್ಯಕ್ತಿ/ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳು ಹಾಗೂ ಅಂಬೇಡ್ಕರ್ ಅಭಿಮಾನಿಗಳ ವತಿಯಿಂದ ಕೊರಟಗೆರೆ ತಾಲ್ಲೂಕಿನಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಮುಖಂಡ ಚಿಕ್ಕಪ್ಪಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಮನವಿ ಸಲ್ಲಿಕೆ ವೇಳೆ ದಾಡಿ ವೆಂಕಟೇಶ್, ಚಿಕ್ಕಪ್ಪಯ್ಯ, ರಾಮಾಂಜನೇಯ, ದಲಿತ್ ಆನಂದ್, ಮಂಜುನಾಥ್, ಶಿವರಾಮಯ್ಯ, ಸಿದ್ದಗಂಗಯ್ಯ, ತಿಮ್ಮರಾಜು, ಗಂಗಣ್ಣ, ರಾಜಣ್ಣ, ವೀರಖ್ಯಾತಯ್ಯ (ವಿ ಕೆ ಆರ್), ಸಿದ್ದೇಶ್ ನೇಗಲಾಲ ಸೇರಿದಂತೆ ಹಲವು ಮುಖಂಡರು ಮತ್ತು ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
