ಪಾವಗಡ: ತಾಲ್ಲೂಕಿನ ಜನರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಪ್ರಜಾ ಸೇವಾ’ ಆಂದೋಲನದ ವೇಳೆ ವಿವಾದಾತ್ಮಕ ಘಟನೆಯೊಂದು ನಡೆದಿದೆ. ತಾಲ್ಲೂಕಿನ ವೈ.ಎನ್. ಹೊಸಕೋಟೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಶಾಸಕ ಎಚ್.ವಿ. ವೆಂಕಟೇಶ್ ಅವರು ಸಾರ್ವಜನಿಕರೊಬ್ಬರೊಂದಿಗೆ ನಡೆದುಕೊಂಡ ರೀತಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳನ್ನು ವಿವರಿಸಲು ಮುಂದಾದ ಸಾರ್ವಜನಿಕರಿಗೆ ಶಾಸಕರು ಕಠಿಣ ಪದ ಬಳಸಿ, “ಅರ್ಜಿ ಕೊಟ್ಟೋಗ್ಬೇಕಷ್ಟೇ, ಜಾಸ್ತಿ ಮಾತಾಡಬೇಡ, ಆಚೆ ಹೋಗು” ಎಂದು ಹೇಳಿರುವುದು ವಿಡಿಯೋದಲ್ಲಿದೆ.
ಸಾರ್ವಜನಿಕರು ಮತ್ತಷ್ಟು ಮಾತನಾಡಲು ಪ್ರಯತ್ನಿಸಿದಾಗ, “ತಿರ್ಗಾ ಮಾತಾಡಿದ್ರೆ ಅಷ್ಟೇ” ಎಂದು ಎಚ್ಚರಿಕೆ ರೀತಿಯಲ್ಲಿ ಶಾಸಕರು ನುಡಿದಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿದ್ದ ಕೆಲವರು ಹಾಗೂ ಹಿಂಬಾಲಕರು ಸಾರ್ವಜನಿಕರಿಗೆ ವಿಡಿಯೋ ಮಾಡದಂತೆ ಮತ್ತು ಮೊಬೈಲ್ ಫೋನ್ಗಳನ್ನು ಆಫ್ ಮಾಡುವಂತೆ ಧಮ್ಕಿ ಹಾಕಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಜನರ ಅಹವಾಲುಗಳನ್ನು ಆಲಿಸಿ ಪರಿಹರಿಸಬೇಕಾದ ಜನಪ್ರತಿನಿಧಿಗಳೇ ಈ ರೀತಿ ಏಕವಚನದಲ್ಲಿ ಗದರಿಸಿ, ದರ್ಪ ತೋರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿವೆ.
ಜನರ ಮನೆಬಾಗಿಲಿಗೆ ಆಡಳಿತವನ್ನು ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮದಲ್ಲೇ ಶಾಸಕರ ವಿರುದ್ಧ ಇಂತಹ ಆರೋಪಗಳು ಕೇಳಿಬಂದಿರುವುದು ರಾಜಕೀಯ ವಲಯದಲ್ಲಿಯೂ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಈ ಕುರಿತು ಶಾಸಕರು ಅಥವಾ ಅವರ ಬೆಂಬಲಿಗರಿಂದ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಹೊರಬರಬೇಕಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
