ತುಮಕೂರು: ಕಾಲೇಜು ಶಿಕ್ಷಣ ಇಲಾಖೆ ಹಾಗೂ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ 2026–27ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಹೊಸ ದಿಗಂತ’ ಅಭಿವಿನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ ಪಿ.ಸಿ. ಅವರು ವೇದಿಕೆಯ ಮೇಲಿದ್ದ ಗಣ್ಯರೊಂದಿಗೆ ಗಿಡಕ್ಕೆ ನೀರುಣಿಸುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಕಾಲೇಜು ಒದಗಿಸುವ ಎಲ್ಲಾ ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಕಾಲೇಜಿನ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ವಸಂತ ಟಿ.ಡಿ., ಶಿಸ್ತು, ನಿರಂತರ ಅಧ್ಯಯನ ಮತ್ತು ಉತ್ತಮ ಚಾರಿತ್ರ್ಯ ರೂಪಿಸಿಕೊಳ್ಳುವುದೇ ವಿದ್ಯಾರ್ಥಿ ಜೀವನದ ಮೂಲ ಗುರಿಯಾಗಬೇಕು ಎಂದು ಹಿತವಚನ ನುಡಿದರು.
ನಂತರ ನಡೆದ ವಿವಿಧ ವಿಷಯವಾರು ತರಬೇತಿ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು. ಸಹಾಯಕ ಪ್ರಾಧ್ಯಾಪಕ ಹಾಗೂ ನೋಡಲ್ ಅಧಿಕಾರಿ ಡಾ. ಯೋಗೀಶ್ ಎನ್. ಅವರು ‘ರೀಸನಿಂಗ್ ಅಂಡ್ ಆಪ್ಟಿಟ್ಯೂಡ್’ ಕುರಿತು ಸುದೀರ್ಘ ಮಾಹಿತಿ ನೀಡಿದರೆ, ಸಿಬ್ಬಂದಿ ಕಾರ್ಯದರ್ಶಿಗಳಾದ ರೇಣುಕಾ ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿದರು. ಹಾಗೆಯೇ IQAC ಸಂಯೋಜಕರಾದ ಡಾ. ಗಿರೀಶ್ ಡಿ. ಅವರು ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಪ್ರಸ್ತಾಪಿಸಿ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸಹ ಪ್ರಾಧ್ಯಾಪಕಿ ಡಾ. ಸುಭದ್ರಮ್ಮ ಎಂ. ಎಲ್ಲರನ್ನೂ ಸ್ವಾಗತಿಸಿದರು. ಸಂಚಾಲಕರು ಹಾಗೂ ಉಪ ಗ್ರಂಥಪಾಲಕರಾದ ದಯಾಗುಣೇಶ ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿದರು ಮತ್ತು ಸಹಾಯಕ ಪ್ರಾಧ್ಯಾಪಕ ವಿನಯ್ ಶಂಕರ್ ವಿ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಡಾ. ಸುಭದ್ರಮ್ಮ ಎಂ., ದೇವರಾಜ್ ಎ.ವಿ., ವಿನಯ್ ಶಂಕರ್ ವಿ. ಹಾಗೂ ಮಧುಶಾಲಿನಿ ಜಿ.ಆರ್. ಉಪಸ್ಥಿತರಿದ್ದರು. ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿನಿಯರಾದ ಗ್ರೀಷ್ಮಾ ಮತ್ತು ದೀಕ್ಷಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಮಧುಶಾಲಿನಿ ಜಿ.ಆರ್. ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
