ತಿಪಟೂರು: ನಗರದ ವಿವಿಧ ಹೋಟೆಲ್ ಗಳು, ಡಾಬಾಗಳು ಮತ್ತು ಬೇಕರಿಗಳ ಮೇಲೆ ನಗರಸಭೆ ಅಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಕಳಪೆ ಗುಣಮಟ್ಟದ ಹಾಗೂ ಅವಧಿ ಮೀರಿದ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕು ವೈದ್ಯಾಧಿಕಾರಿ ಚೆನ್ನಕೇಶವ ಈ ಕುರಿತು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯ ವೇಳೆ ಕೆಲವು ಹೋಟೆಲ್ ಗಳಲ್ಲಿ ಯಾವುದೇ ಸ್ವಚ್ಛತೆ ಇಲ್ಲದೆ ಕೊಳೆತ ತರಕಾರಿಗಳನ್ನು ಬಳಸುವುದು ಕಂಡುಬಂದಿದ್ದು, ತ್ರಿಗುಣ ಡಾಬಾ ಹಾಗೂ ರೇಣುಕಾ ಬಾರ್ ಅಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಲಾಗಿದೆ. ನಕ್ಷತ್ರ ಬಾರ್ ನಲ್ಲಿಯೂ ಸ್ವಚ್ಛತೆ ಕೊರತೆ ಕಂಡುಬಂದಿದ್ದು, ಅಲ್ಲಿ ಅವಧಿ ಮೀರಿದ ಮೊಸರು ಪತ್ತೆಯಾಗಿದೆ. ಇದೇ ಮಾರ್ಗದಲ್ಲಿರುವ ಯಶಸ್ ಬೇಕರಿಯನ್ನು ಪರಿಶೀಲಿಸಿದಾಗ, ಪರವಾನಗಿ ಅವಧಿ ಮುಗಿದು ಆರು ತಿಂಗಳಾದರೂ ಯಾವುದೇ ನವೀಕರಣವಿಲ್ಲದೆ ಬೇಕರಿ ನಡೆಸುತ್ತಿರುವುದು ತಿಳಿದುಬಂದಿದೆ. ಈ ಎಲ್ಲಾ ನಿಯಮ ಉಲ್ಲಂಘನೆಗಳಿಗೂ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ನಗರಸಭೆ ಆಯುಕ್ತರಾದ ವಿಶ್ವೇಶ್ವರ ಭದ್ರಗಡ್ಡೆ ಮಾತನಾಡಿ, ತಿಪಟೂರು ನಗರ ಸಭೆ ವ್ಯಾಪ್ತಿಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯಕರವಾದ ಆಹಾರ ಸಿಗಬೇಕೆಂಬುದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಹೇಳಿದರು. ನಗರದ ಬಹಳಷ್ಟು ಹೋಟೆಲ್ ಹಾಗೂ ಬೀದಿ ಬದಿ ವ್ಯಾಪಾರಿಗಳಲ್ಲಿ ಅವಧಿ ಮೀರಿದ ಟೊಮ್ಯಾಟೋ ಕೆಚಪ್, ಅಜಿನೊಮೋಟೋ ಹಾಗೂ ಕಳಪೆ ಗುಣಮಟ್ಟದ ವಸ್ತುಗಳು ಪತ್ತೆಯಾಗಿದ್ದು, ಇನ್ನು ಮುಂದೆ ಇಂತಹ ತಪ್ಪುಗಳು ಮರುಕಳಿಸಿದರೆ ಭಾರೀ ದಂಡ ವಿಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
