ಬೆಂಗಳೂರು/ಮಧುಗಿರಿ: ಮಧುಗಿರಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಿಂದ ನೃಪತುಂಗ ಸರ್ಕಲ್‌ವರೆಗೆ (ರಾಷ್ಟ್ರೀಯ ಹೆದ್ದಾರಿ–69) ಇರುವ 390 ಮೀಟರ್ ವರೆಗಿನ ಅಪಾಯಕಾರಿ ಬ್ಲಾಕ್ ಸ್ಪಾಟ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ, ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರೂ. 29.94 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಿರುವುದಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ಮಧುಗಿರಿ ಪಟ್ಟಣದ ಈ ನಿರ್ದಿಷ್ಟ ಪ್ರದೇಶದಲ್ಲಿ ಕಳೆದ 8 ವರ್ಷಗಳಿಂದ ಒಟ್ಟು 10 ಅಪಘಾತಗಳು ಸಂಭವಿಸಿದ್ದು, ದುರದೃಷ್ಟವಶಾತ್ 4 ಮಂದಿ ಪ್ರಾಣ ಕಳೆದುಕೊಂಡಿದ್ದರು ಹಾಗೂ 8 ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಬ್ಲಾಕ್ ಸ್ಪಾಟ್ ಅನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂಬುದು ಸಾರ್ವಜನಿಕರ ಮತ್ತು ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿತ್ತು.
ಜನರ ಈ ಪ್ರಮುಖ ಸಮಸ್ಯೆಗೆ ಸ್ಪಂದಿಸುವಂತೆ ಕೋರಿ, ಕೇಂದ್ರ ಸಚಿವ ವಿ. ಸೋಮಣ್ಣ ಅವರು ಜೂನ್ 17ರಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಅಲ್ಲದೇ ಆಗಸ್ಟ್ 12ರಂದು ದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ನೇರವಾಗಿ ಭೇಟಿ ಮಾಡಿ, ಈ ಬ್ಲಾಕ್ ಸ್ಪಾಟ್ ನ ತೀವ್ರತೆಯ ಬಗ್ಗೆ ವಿವರಿಸಿ ವಿಶೇಷ ಅನುಮೋದನೆ ನೀಡುವಂತೆ ಕೋರಿದ್ದರು.
ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಮಧುಗಿರಿ ಜನತೆಯ ಬಹುಕಾಲದ ಕನಸು ನನಸಾಗಿದ್ದು, ಸಚಿವರ ಮನವಿಗೆ ಸ್ಪಂದಿಸಿ ತಕ್ಷಣವೇ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮಧುಗಿರಿ ಜನತೆಯ ಪರವಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಚತುಷ್ಪಥ ರಸ್ತೆ ನಿರ್ಮಾಣದಿಂದ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಸಂಚಾರ ಸುಗಮವಾಗಲಿದ್ದು, ಅಪಘಾತಗಳಿಗೆ ಬ್ರೇಕ್ ಬೀಳಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
