ಬೆಂಗಳೂರು: ಮುಕ್ತ ಚುನಾವಣೆ, ಮಾನವ ಹಕ್ಕುಗಳಿಗೆ ಬೆಲೆ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಜನಸಮುದಾಯದ ಭಾಗವಹಿಸುವಿಕೆ ಇರುವ ದೇಶಗಳಲ್ಲಿ ಮಾತ್ರ ಶಾಂತಿಯುತ ವಾತಾವರಣವಿರಲು ಸಾಧ್ಯ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರತಿಪಾದಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನೆರೆಯ ದೇಶಗಳಲ್ಲಿ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾಗಿದ್ದರೂ, ಡಾ. ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಬಲವಾದ ಅಡಿಪಾಯದಿಂದಾಗಿ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವ ಬೆಳವಣಿಗೆಗಳಿಗೆ ಗೆಲುವು ಸಿಕ್ಕಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ದೇಶದ ಜನಸಂಖ್ಯೆಯಲ್ಲಿ ಶೇ. 65ರಷ್ಟು ಯುವ ಸಮುದಾಯವಿದ್ದು, ಇಂದಿನ ಜೆನ್‌ಝೀ ಪೀಳಿಗೆಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಾರೆ ಎರೆಯಬೇಕಿದೆ. ಪ್ರತಿಯೊಂದು ಶಾಲಾ-ಕಾಲೇಜುಗಳಿಗೆ ಮತ್ತು ಮನೆಗಳಿಗೆ ಸಂವಿಧಾನದ ಪೀಠಿಕೆಯನ್ನು ತಲುಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಹನ್ನೆರಡನೇ ಶತಮಾನದಲ್ಲೇ ಬಸವಣ್ಣನವರು ಸಮಾನತೆಯ ಪ್ರತಿಪಾದನೆ ಮಾಡಿ, ಅಲ್ಲಮ ಪ್ರಭುಗಳ ಅಧ್ಯಕ್ಷತೆಯಲ್ಲಿ ಅನುಭವ ಮಂಟಪವನ್ನು ಪ್ರಾರಂಭಿಸುವ ಮೂಲಕ ಇಡೀ ವಿಶ್ವದಲ್ಲಿ ಪ್ರಥಮ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ್ದರು. ಬ್ರಿಟಿಷ್ ಪಾರ್ಲಿಮೆಂಟ್ ಅನ್ನು ದಿ ಫಾದರ್ ಆಫ್ ಡೆಮಾಕ್ರಸಿ ಎಂದು ಕರೆಯಲಾಗುತ್ತಿದ್ದರೂ, ಮದರ್ ಆಫ್ ಡೆಮಾಕ್ರಸಿ ಭಾರತದಲ್ಲಿದೆ ಎಂದು ಅವರು ಬಣ್ಣಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಾ, ಚುನಾವಣಾ ವ್ಯವಸ್ಥೆಯನ್ನು ಹಾಳುಮಾಡಿ ಶಾಶ್ವತವಾಗಿ ಅಧಿಕಾರದಲ್ಲಿರಲು ಯತ್ನಿಸುತ್ತಿರುವುದು ಬಹಳ ಅಪಾಯಕಾರಿ ಎಂದರು. ಇದರ ಪರಿಣಾಮ ಮೊದಲು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಂತಹ ಸಮಾಜದ ಕೆಳಸ್ತರದಲ್ಲಿರುವವರ ಮೇಲೆ ಬೀಳಲಿದೆ ಎಂದು ಎಚ್ಚರಿಸಿದರು. ಐದು ಸಾವಿರ ವರ್ಷಗಳಿಂದ ತುಳಿತಕ್ಕೆ ಒಳಗಾದವರನ್ನು ಮೇಲೆತ್ತಲು ಅಂಬೇಡ್ಕರ್ ಅವರು ಮೀಸಲಾತಿ ವ್ಯವಸ್ಥೆಯನ್ನು ತಂದಿದ್ದಾರೆಯೇ ವಿನಃ ಬೇರೆ ಕಾರಣಕ್ಕಲ್ಲ ಎಂದ ಅವರು, ಶೋಷಿತ ಸಮುದಾಯಗಳ ರಕ್ಷಣೆಗೆ ನೀಡಿರುವ ಮೀಸಲಾತಿಯ ಕುರಿತು ಇಂದು ಅಸಂಬದ್ಧ ಪ್ರಶ್ನೆಗಳನ್ನು ಎತ್ತುವುದು ಸರಿಯಲ್ಲ ಎಂದರು. ಪ್ರಜಾಪ್ರಭುತ್ವ ಎಂಬುದು ರಕ್ತಪಾತವಿಲ್ಲದೆ ಜನರ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ವ್ಯವಸ್ಥೆಯಾಗಿದ್ದು, ಸಂವಿಧಾನಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವವರನ್ನು ದೂರವಿಟ್ಟು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೆ.ಹೆಚ್. ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ರಿಜ್ವಾನ್ ಅರ್ಷದ್, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್. ತಂಗಡಗಿ, ಮಾಜಿ ಸಚಿವರು ಹಾಗೂ ಶಾಸಕರಾದ ಡಾ. ಹೆಚ್.ಸಿ. ಮಹದೇವಪ್ಪ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಅಶೋಕ್ ಮನುಗೋಳಿ, ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್, ಕರ್ನಾಟಕ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬರೆಡ್ಡಿ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಪಿ.ಟಿ. ಪರಮೇಶ್ವರ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
