ಮೈಸೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಮೈಸೂರಿನ ಕುವೆಂಪುನಗರದಲ್ಲಿ ನಿರ್ಮಿಸಲಾಗಿರುವ ನೂತನ ಮನೆಯ ಗೃಹಪ್ರವೇಶವು ಅತ್ಯಂತ ಸರಳ ಹಾಗೂ ಖಾಸಗಿಯಾಗಿ ಶಾಸ್ತ್ರೋಕ್ತವಾಗಿ ನೆರವೇರಿದೆ.
ಯಾವುದೇ ರಾಜಕೀಯ ಅದ್ದೂರಿತನವಿಲ್ಲದೆ, ರಾಜಕೀಯ ನಾಯಕರು ಹಾಗೂ ಸಾರ್ವಜನಿಕರಿಗೆ ಯಾವುದೇ ಆಹ್ವಾನ ನೀಡದೆ, ಅತ್ಯಂತ ಗೌಪ್ಯವಾಗಿ ಈ ಧಾರ್ಮಿಕ ಕಾರ್ಯಕ್ರಮ ಜರುಗಿದೆ.
ಭಾನುವಾರ ರಾತ್ರಿಯಿಂದಲೇ ನೂತನ ಮನೆಯಲ್ಲಿ ಗಣಪತಿ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳು ಆರಂಭವಾಗಿದ್ದವು. ಸೋಮವಾರ ಮುಂಜಾನೆ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರ ನೇತೃತ್ವದಲ್ಲಿ ಪೂರ್ಣಾಹುತಿ ಹಾಗೂ ಗೃಹಪ್ರವೇಶದ ವಿಧಿಗಳು ಜರುಗಿದವು. ಕುಟುಂಬದ ಕೆಲವೇ ಕೆಲವು ಸದಸ್ಯರು ಮತ್ತು ಆಪ್ತರಷ್ಟೇ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿದ್ದರಾಮಯ್ಯ ಅವರ ಮೈಸೂರು ಭೇಟಿಯ ಮಾಹಿತಿಯನ್ನೂ ಕೂಡ ಮುಂಚಿತವಾಗಿ ಗುಟ್ಟಾಗಿಡಲಾಗಿತ್ತು.
ಎರಡು ಬಾರಿ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಮತ್ತು ದೀರ್ಘಕಾಲ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರೂ ಸಿದ್ದರಾಮಯ್ಯ ಅವರಿಗೆ ಮೈಸೂರಿನಲ್ಲಿ ಸ್ವಂತ ಮನೆಯಿರಲಿಲ್ಲ. ಮೈಸೂರಿನಲ್ಲಿ ಸುಸಜ್ಜಿತ ಸ್ವಂತ ಮನೆಯನ್ನು ನಿರ್ಮಿಸಬೇಕೆಂಬುದು ಅವರ ಧರ್ಮಪತ್ನಿ ಪಾರ್ವತಿಯವರ ದಶಕಗಳ ಕನಸಾಗಿತ್ತು. ಇಷ್ಟು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ಆಪ್ತ ಸ್ನೇಹಿತ ಮರಿಸ್ವಾಮಿ ಅವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಇದೀಗ ಪತ್ನಿಯ ಆಸೆಯಂತೆ ಸ್ವಂತ ಮನೆ ನಿರ್ಮಿಸಿಕೊಂಡು, ಬಾಡಿಗೆ ಮನೆಯಿಂದ ಹೊಸ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆ ಬಳಿ 120×80 ಅಡಿ ವಿಸ್ತೀರ್ಣದಲ್ಲಿ ಈ ಮೂರು ಅಂತಸ್ತಿನ ಬೃಹತ್ ಬಂಗಲೆಯನ್ನು ನಿರ್ಮಿಸಲಾಗಿದೆ. ದಕ್ಷಿಣಾಭಿಮುಖವಾಗಿರುವ ಈ ಮನೆಯ ಮುಂಭಾಗದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಬೃಹತ್ ತೆಂಗಿನಗರಿಯ ಚಪ್ಪರ ಹಾಕಲಾಗಿದೆ. ಭದ್ರತಾ ದೃಷ್ಟಿಯಿಂದ ಹಾಗೂ ಖಾಸಗಿತನ ಕಾಯ್ದುಕೊಳ್ಳಲು ಮನೆಯ ಸುತ್ತಲೂ ಹಸಿರು ಪರದೆ (ಪೆಂಡಾಲ್) ನಿರ್ಮಿಸಲಾಗಿದ್ದು, ಯಾವುದೇ ಹೂಗುಚ್ಛ ಅಥವಾ ಸ್ವಾಗತ ಕಮಾನುಗಳಿಲ್ಲದೆ ಸಂಪೂರ್ಣವಾಗಿ ಧಾರ್ಮಿಕ ಆಚರಣೆಗೆ ಮಾತ್ರ ಆದ್ಯತೆ ನೀಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
