ರಾಯಚೂರು: ತನ್ನ ತಂಗಿಯೊಂದಿಗೆ ಅನೈತಿಕ ಸಂಬಂಧವಿರುವ ಶಂಕೆಯ ಹಿನ್ನೆಲೆಯಲ್ಲಿ, ಮನೆಯಲ್ಲಿ ಊಟ ಮಾಡುತ್ತಿದ್ದ ಯುವಕನನ್ನು ಮತ್ತೊಬ್ಬ ಯುವಕ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಹನುಮೇಶ್ (32) ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಅದೇ ಏರಿಯಾದ ಆರೋಪಿ ಶಂಕರ್, ಹತ್ಯೆಯ ಬಳಿಕ ತಾನಾಗಿಯೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.
ಹನುಮೇಶ್ ಅವಿವಾಹಿತನಾಗಿದ್ದು, ಭತ್ತದ ವ್ಯಾಪಾರ ಮಾಡಿಕೊಂಡು ತಂದೆ–ತಾಯಿ ಹಾಗೂ ತಮ್ಮನೊಂದಿಗೆ ವಾಸವಾಗಿದ್ದ. ಶುಕ್ರವಾರ (ಸೆಪ್ಟೆಂಬರ್ 12) ಬೆಳಿಗ್ಗೆ 10:30ರ ಸುಮಾರಿಗೆ ಕುಟುಂಬದವರೆಲ್ಲರೂ ಕೆಲಸಕ್ಕೆ ತೆರಳಿದ್ದರಿಂದ ಹನುಮೇಶ್ ಮನೆಯಲ್ಲಿ ಒಬ್ಬನೇ ಇದ್ದನು. ಆತ ಊಟ ಮುಗಿಸಿ ಭತ್ತದ ವ್ಯಾಪಾರಕ್ಕೆ ತೆರಳಲು ಸಜ್ಜಾಗುತ್ತಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಆರೋಪಿ ಶಂಕರ್, ಹಿಂಬದಿಯಿಂದ ದಾಳಿ ನಡೆಸಿ ಹನುಮೇಶ್ ನ ತಲೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿ ಶಂಕರ್ ಹಾಗೂ ಮೃತ ಹನುಮೇಶ್ ಅವರ ಮನೆಗಳು ಅಕ್ಕಪಕ್ಕದಲ್ಲೇ ಇವೆ. ಆರೋಪಿ ಶಂಕರ್ ನ ಸಹೋದರಿಯೊಂದಿಗೆ ಹನುಮೇಶ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಶಂಕರ್ ನ ಮನಸ್ಸಿನಲ್ಲಿ ಮೂಡಿತ್ತು. ಇದೇ ಕಾರಣದಿಂದ ಆತನ ಮೇಲೆ ದ್ವೇಷ ಸಾಧಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡುವುದಕ್ಕೂ ಮುನ್ನ ಆರೋಪಿ ಶಂಕರ್ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೈಯಲ್ಲಿ ಮಚ್ಚು ಹಿಡಿದುಕೊಂಡು ನಿಂತಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದನು. ಕೃತ್ಯ ಎಸಗಿದ ಬಳಿಕ ತಾನೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
