ಬೆಂಗಳೂರು: ಪೊಲೀಸ್ ಠಾಣೆಗೆ ನುಗ್ಗುವುದಾಗಿ ಎಚ್ಚರಿಕೆ ನೀಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ತಾಕತ್ತಿದ್ದರೆ ಠಾಣೆಗೆ ನುಗ್ಗಿ, ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ಉಚಿತ ವ್ಯವಸ್ಥೆ ಮಾಡಲಾಗುವುದು ಎಂದು ತಿರುಗೇಟು ನೀಡಿದ್ದಾರೆ.
ಗಣೇಶ ಹಬ್ಬದ ಮೆರವಣಿಗೆ ಹಾಗೂ ಸೂಕ್ಷ್ಮ ಪ್ರದೇಶಗಳ ಮಾರ್ಗದ ಕುರಿತು ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಶಾಂತಿ ಸಭೆಯಲ್ಲಿ ಇನ್ಸ್ಪೆಕ್ಟರ್ ಧನಂಜಯ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿ, “ಯಾರಿಗೆ ಧಮ್ಕಿ ಹಾಕ್ತೀರಿ? ಇನ್ನೊಮ್ಮೆ ಈ ರೀತಿ ಮಾತನಾಡಿದರೆ ನಾನೇ ನೇರವಾಗಿ ಪೊಲೀಸ್ ಠಾಣೆಗೆ ನುಗ್ಗುತ್ತೇನೆ” ಎಂದು ಎಚ್ಚರಿಕೆ ನೀಡಿದ್ದರು.
ಪ್ರತಾಪ್ ಸಿಂಹ ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಾಮಾಜಿಕ ಜಾಲತಾಣದ ಮೂಲಕ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ಮೈಸೂರಿನ ಕಡೆಯ ‘ಪೇಟೆ ರೌಡಿ’ಯೊಬ್ಬ ಪೊಲೀಸರನ್ನು ಬೆದರಿಸುವ ಮಾತುಗಳನ್ನಾಡಿದ್ದಾನೆ. ಅಸ್ತಿತ್ವ ಕಳೆದುಕೊಂಡು ಕತ್ತಲೆ ಜಗತ್ತಿನ ಅತೃಪ್ತ ಆತ್ಮದಂತೆ ಪರಿತಪಿಸುತ್ತಿರುವ ಆ ವ್ಯಕ್ತಿ, ವಾರಕ್ಕೊಮ್ಮೆ ಮಾಧ್ಯಮಗಳನ್ನು ಕರೆಸಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂದುವರಿದು, “ಪೊಲೀಸ್ ಠಾಣೆಗೆ ನುಗ್ಗುತ್ತೇನೆ ಎಂದಿರುವ ಆ ವ್ಯಕ್ತಿಗೆ ಮುಕ್ತ ಆಹ್ವಾನವಿದೆ. ಠಾಣೆಗೆ ನುಗ್ಗಿದ ನಂತರ ಆತನನ್ನು ಸೀದಾ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವ ವ್ಯವಸ್ಥೆಯನ್ನು ನಮ್ಮ ಸರ್ಕಾರ ಉಚಿತವಾಗಿ ಕಲ್ಪಿಸಲಿದೆ” ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸುವಲ್ಲಿ ಗೃಹ ಇಲಾಖೆ ಸಂಪೂರ್ಣ ಬದ್ಧವಾಗಿದೆ. ಸೂಕ್ಷ್ಮ ಸಂದರ್ಭಗಳನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
