ಹುಬ್ಬಳ್ಳಿ: ನಗರದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ತರುವ ವೇಳೆ ಮೆರವಣಿಗೆಯಲ್ಲಿ ಕೆಲ ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ. ಈ ಕುರಿತು ಪೊಲೀಸರು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಕಿಡಿಗೇಡಿಗಳಿಗೆ ಲಾಠಿ ಏಟಿನ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.
ಸೆಪ್ಟೆಂಬರ್ 12ರ ರಾತ್ರಿ ಸುಮಾರು 9:30ರ ವೇಳೆಗೆ ಈ ಘಟನೆ ನಡೆದಿದೆ. ಹುಬ್ಬಳ್ಳಿಯ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ಸಾಗುವ ರಸ್ತೆಯ ಬಳಿ ಮೇದಾರ್ ಓಣಿಯ ಗಣಪತಿ ಮತ್ತು ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾಗಿದ್ದವು. ಈ ಸಂದರ್ಭದಲ್ಲಿ ಕಲಾಲ್ ಓಣಿಯ ಗಣಪತಿ ಡಿಜೆ ಮುಂದೆ ಕೆಲ ಯುವಕರು ಮದ್ಯದ ಅಮಲಿನಲ್ಲೋ ಅಥವಾ ಉನ್ಮಾದದಲ್ಲೋ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾರೆ.
ಮೆರವಣಿಗೆಯಲ್ಲಿ ಮಹಿಳೆಯರಿಗೆ ಕಿರಿಕುಳ ನೀಡುತ್ತಿರುವ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಯಾವುದೇ ದೊಡ್ಡ ಅಹಿತಕರ ಘಟನೆಗೆ ಅವಕಾಶ ನೀಡದೆ ಕೂಡಲೇ ಮಧ್ಯಪ್ರವೇಶಿಸಿದ್ದಾರೆ. ಕೇವಲ 30 ಸೆಕೆಂಡ್ ಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ ಬಲಪ್ರಯೋಗ ಮಾಡಿ, ಅಸಭ್ಯ ವರ್ತನೆ ತೋರಿದ ಕಿಡಿಗೇಡಿಗಳನ್ನು ಲಾಠಿ ಬೀಸಿ ಅಲ್ಲಿಂದ ಚದುರಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಭೂಷಣ ಬೋರಸೆ ಮಾಹಿತಿ ನೀಡಿದ್ದಾರೆ.
ಈ ಅಸಭ್ಯ ವರ್ತನೆ ತೋರಿದ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸೂಕ್ತ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
