ಮಿಡಿಗೇಶಿ: ಮಧುಗಿರಿ ತಾಲ್ಲೂಕು, ಮಿಡಿಗೇಶಿ ಹೋಬಳಿ, ನೇರಳಕೆರೆ ಗ್ರಾಮ ಪಂಚಾಯಿತಿಗೆ ಸೇರಿದ ದೊಡ್ಡಗೊಲ್ಲರಹಟ್ಟಿ ಗ್ರಾಮದಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕ ಕಳೆದ ಆರು ತಿಂಗಳಿಂದ ಕೆಟ್ಟುಹೋಗಿದ್ದು, ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ.
ಈ ಕುರಿತು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಜಂಪಣ್ಣ ಮಾತನಾಡಿ, ಗ್ರಾಮದ ಶುದ್ಧ ನೀರಿನ ಘಟಕವನ್ನು ಕೂಡಲೇ ದುರಸ್ತಿ ಮಾಡಿ ಕುಡಿಯುವ ನೀರು ಒದಗಿಸಬೇಕು. ಗ್ರಾಮೀಣ ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಒತ್ತಾಯಿಸಿದ್ದಾರೆ.
ವಾಹನ ಇರುವವರು ದೂರದ ಊರುಗಳಿಗೆ ಹೋಗಿ ಹೇಗೋ ಶುದ್ಧ ನೀರು ತರುತ್ತಿದ್ದಾರೆ. ಆದರೆ ವಾಹನ ಇಲ್ಲದ ಬಡವರು, ವೃದ್ಧರು ಅನಿವಾರ್ಯವಾಗಿ ಫ್ಲೋರೈಡ್ ಅಂಶವಿರುವ ಬೋರ್ವೆಲ್ ನೀರನ್ನೇ ಕುಡಿದು ಆರೋಗ್ಯ ಕೆಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಕೂಡಲೇ ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡಿ ಶುದ್ಧ ನೀರು ಒದಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಶುದ್ಧ ನೀರಿನ ಘಟಕದಿಂದ ಆಗುವ ಅನುಕೂಲ: ಶುದ್ಧ ನೀರಿನ ಘಟಕದಲ್ಲಿ ನೀರನ್ನು ಶುದ್ಧೀಕರಿಸುವುದರಿಂದ ನೀರಿನಲ್ಲಿರುವ ಧೂಳು, ಬ್ಯಾಕ್ಟೀರಿಯಾ, ವೈರಸ್, ಹೆಚ್ಚಿನ ಲವಣಾಂಶ ಮತ್ತು ಫ್ಲೋರೈಡ್ ನಂತಹ ಹಾನಿಕಾರಕ ಅಂಶಗಳು ನಿವಾರಣೆಯಾಗುತ್ತವೆ. ಇದರಿಂದ ಕಾಲರಾ, ಟೈಫಾೈಡ್, ಕಾಮಾಲೆಯಂತಹ ನೀರಿನಿಂದ ಹರಡುವ ರೋಗಗಳು ಬರುವುದಿಲ್ಲ. ಮೂತ್ರಪಿಂಡದಲ್ಲಿ ಕಲ್ಲು ಆಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಫ್ಲೋರೈಡ್ ನೀರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ: ಬೋರ್ ವೆಲ್ ನ ಕೆಂಪು ನೀರಿನಲ್ಲಿ ಕಬ್ಬಿಣದ ಅಂಶ ಮತ್ತು ಫ್ಲೋರೈಡ್ ಅಂಶ ಅತಿಯಾಗಿರುತ್ತದೆ. ಈ ನೀರನ್ನು ನೇರವಾಗಿ ಕುಡಿಯುವುದರಿಂದ ಹೊಟ್ಟೆನೋವು, ವಾಂತಿ–ಭೇದಿ, ಹಲ್ಲುಗಳು ಹಳದಿಯಾಗುವುದು ಮತ್ತು ಕೂದಲೂ ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲ ಕುಡಿಯುವುದರಿಂದ ಮೂತ್ರ ಪಿಂಡ, ಯಕೃತ್ತಿನ ಮೇಲೆ ದುಷ್ಪರಿಣಾಮ ಬೀರಿ, ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
