ತುಮಕೂರು: ತುಮಕೂರು ದಸರಾ ಕೊಡುಗೆಯಾಗಿ ನಗರದ ಅಮಾನಿಕೆರೆಯಲ್ಲಿ ನಾವೀನ್ಯಪೂರ್ಣ ತೇಲುವ ಸಂಗೀತ ಕಾರಂಜಿ ಹಾಗೂ ಡಾ.ಶ್ರೀ ಶಿವ ಕುಮಾರ ಸ್ವಾಮೀಜಿ ವೃತ್ತದಲ್ಲಿ ‘ತುಮಕೂರು ಸ್ಕ್ವೇರ್’ ಶಾಶ್ವತ ನಿರ್ಮಾಣಕ್ಕೆ ಶುಕ್ರವಾರ ಉಪ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಶಿಲಾನ್ಯಾಸ ನೆರವೇರಿಸಿದರು.
ಪ್ರತ್ಯೇಕವಾಗಿ ಗುದ್ದಲಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅವರು, ಈ ಉಭಯ ಯೋಜನೆಗಳನ್ನು ಕೇವಲ ದಸರಾ ಹಬ್ಬಕ್ಕಾಗಿ ಮಾಡುತ್ತಿರುವುದಲ್ಲ, ಶಾಶ್ವತವಾಗಿ ಇರಲಿದ್ದು ನಗರವಾಸಿಗಳನ್ನು ರಂಜಿಸಲಿದೆ. ತುಮಕೂರು ನಗರದ ಸೌಂದರ್ಯವೂ ವೃದ್ಧಿಸಲಿದೆ. ಪ್ರಸ್ತುತ ವಾರದ ಪ್ರತಿ ಶನಿವಾರ, ಭಾನುವಾರ ಸಂಗೀತ ಕಾರಂಜಿ ಕಾರ್ಯನಿರ್ವಹಿಸುವಂತೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ, ಆದರೆ ದಿನನಿತ್ಯವೂ ಅಗತ್ಯತೆ ಇದ್ದರೆ ಅದನ್ನು ಮುಂದೆ ನೋಡಿಕೊಂಡು ಆರಂಭಿಸಲಾಗುವುದು. ನೂರು ಅಡಿಗೂ ಹೆಚ್ಚು ಎತ್ತರಕ್ಕೆ ತೇಲುವ ಸಂಗೀತ ಕಾರಂಜಿಯು ಸುಮಾರು 300 ಅಡಿ ವಿಸ್ತೀರ್ಣಕ್ಕೆ ಹರಡಲಿದ್ದು, ಕಣ್ಣುಗಳಿಗೆ ರಸದೌತಣ ನೀಡಲಿದೆ.
ವಿದೇಶಗಳ ಪ್ರಮುಖ ನಗರಗಳಲ್ಲಿ ಜನಾಕರ್ಷಣೆಯ ಸೆಂಟರ್ ಗಳಿರುತ್ತವೆ. ಉದಾಹರಣೆಗೆ ನ್ಯೂಯಾರ್ಕ್‌ನ ನ್ಯೂಯಾರ್ಕ್ ಸ್ಕ್ವೇರ್. ಅದೇ ಮಾದರಿಯಲ್ಲಿ ತುಮಕೂರು ನಗರದಲ್ಲೂ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಸ್ಕ್ವೇರ್ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದೇವೆ. ತುಮಕೂರು ಕೂಡ ಆಧುನಿಕತೆಯಲ್ಲಿ ಮುಂದಿರುವುದನ್ನು ಪ್ರದರ್ಶಿಸಲು ತುಮಕೂರು ಮಹಾನಗರ ಪಾಲಿಕೆಯ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿಸ್ಪ್ಲೇ ಬೋರ್ಡ್‌ನಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು, ಐತಿಹಾಸಿಕ ಪ್ರಾಮುಖ್ಯತೆಗಳು, ಪ್ರವಾಸಿ ಕೇಂದ್ರಗಳು, ಐತಿಹಾಸಿಕ ಸ್ಥಳಗಳು, ದೇವಸ್ಥಾನಗಳು, ಸಂಸ್ಥೆಗಳನ್ನು ಪ್ರದರ್ಶಿಸಲಾಗುವುದು. ಮನರಂಜನೆಯ ವೇದಿಕೆಯಾಗಿಯೂ ಉಪಯೋಗಿಸಲಾಗುವುದು. ಇದರಿಂದ ತುಮಕೂರು ಸಾಮಾನ್ಯ ಜನರಿಗೆ ದೂರದೂರುಗಳ ಪರಿಚಯ ಸಿಗಲಿದೆ. ಗೋಲ್‌ಗುಮ್ಮಟ, ಹಂಪಿಯಂತಹ ಐತಿಹಾಸಿಕ ಸ್ಮಾರಕ, ಉತ್ಸವಗಳನ್ನು ಇಲ್ಲಿಂದಲೇ ನೋಡಬಹುದಾಗಿದೆ.
–ಡಾ.ಜಿ.ಪರಮೇಶ್ವರ, ಉಪಮುಖ್ಯಮಂತ್ರಿ
(ಎಸ್ ಎಸ್ ವೃತ್ತ) ನಾಲ್ಕು ದಿಕ್ಕಿನಲ್ಲಿ ಬೃಹತ್ ಡಿಸ್‌ಪ್ಲೇ ಬೋರ್ಡ್ ಅಳವಡಿಸಿ ಕಲೆ, ಸಂಸ್ಕೃತಿ, ಸರ್ಕಾರದ ಯೋಜನೆಗಳ ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ಸರ್ಕಲ್ ಹೆಸರನ್ನು ಬದಲಾಯಿಸುವುದೇ ಉದ್ದೇಶಕ್ಕಕ್ರಮದೊಂದಿಲ್ಲ. ಡಾ.ಶ್ರೀ ಶಿವಕುಮಾರಸ್ವಾಮೀಜಿ ವೃತ್ತ ಶಿವಕುಮಾರಸ್ವಾಮೀಜಿ ವೃತ್ತವಾಗಿಯೇ ಉಳಿಯಲಿದೆಯೆಂದರು.
ಸೂಕ್ತ ದಾಖಲೆ ಒದಗಿಸಿದರೆ ಪಿಂಚಣಿ ಮರುಜಾರಿ: 23 ಲಕ್ಷ ಪಿಂಚಣಿದಾರರ ಪಿಂಚಣಿ ಸ್ಥಗಿತಗೊಳಿಸಿರುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ ಅವರು ನಮ್ಮ ಸರ್ಕಾರದ ಗರಿಷ್ಠ ಆದಾಯ ಮಿತಿಯನ್ನು 33 ಸಾವಿರ ರೂ.ಗಳಿಂದ 1.2 ಲಕ್ಷ ರೂ. ಗೆ ಏರಿಕೆ ಮಾಡಿದೆ. ಇದೀಗ ಸ್ಥಗಿತಗೊಂಡಿರುವ ಪಿಂಚಣಿದಾರರು ಸೂಕ್ತ ವಯಸ್ಸಿನ ದೃಢೀಕರಣ ಪತ್ರ, ಆದಾಯ ಮತ್ತು ವಿಳಾಸ ಪ್ರಮಾಣಪತ್ರಗಳನ್ನು ಒದಗಿಸಿದರೆ ಪಿಂಚಣಿ ಮುಂದುವರಿಯಲಿದೆ. ವಯಸ್ಸು ಅಗದವರೂ, ಟ್ಯಾಕ್ಸ್ ಕಟ್ಟುವವರು, ಸರ್ಕಾರಿ ನೌಕರರು ಪಿಂಚಣಿ ಪಡೆಯುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೇಂದ್ರಕ್ಕೆ ಬರ ಪರಿಹಾರ ಕೋರಿಕೆ ಸಂಬಂಧ ಸರ್ಕಾರ ನಿಯೋಗ ತೆರಳುವುದೇ ಎಂಬ ಪ್ರಶ್ನೆಗೆ ಮೊದಲು 2 ಪತ್ರ ಬರೆಯುತ್ತೇವೆ. ಸ್ಪಂದಿಸದಿದ್ದರೆ 3ನೇ ಪತ್ರ ಬರೆದು ನಿಯೋಗದಲ್ಲಿ ಪ್ರಧಾನಿ ಭೇಟಿಯಾಗುವುದಾಗಿ ತಿಳಿಸಿದರು. ಈ ವೇಳೆ ಬಿಎಂಟಿಸಿ ಉಪಾಧ್ಯಕ್ಷ ನಿಖೇತ್‌ರಾಜ್ ಮೌರ್ಯ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪಾಲಿಕೆ ಆಯುಕ್ತ ಬಿ.ಶುಭ, ಟೂಡಾ ಆಯುಕ್ತ ಉಮೇಶ್‌ಚಂದ್ರ, ಪಾಲಿಕೆ ಕಂದಾಯ ಉಪ ಆಯುಕ್ತ ಮನುಕುಮಾರ್, ಎಕ್ಸಿ ಕ್ಯೂಟಿವ್ ಎಂಜಿನಿಯರ್ ಸಂದೀಪ್ ಸೇರಿ ಹಲವರಿದ್ದರು.
ಅವಶ್ಯವಾದರೆ ನಕ್ಸಲ್ ನಿಗ್ರಹ ದಳ ಪಾವಗಡಕ್ಕೆ:
ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದ ಪೋಸ್ಟರ್ ಪ್ರತ್ಯಕ್ಷವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು ನನ್ನ ಗಮನಕ್ಕೆ ಬಂದಿದೆ. ಎಸ್ ಪಿ ಅವರ ಜೊತೆ ಈ ಕುರಿತು ಚರ್ಚೆ ಮಾಡುತ್ತೇನೆ. ಅಂತಹ ಬೆಳವಣಿಗೆ ಕಂಡುಬಂದರೆ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗುವುದು. ನಕ್ಸಲ್ ಮುಕ್ತ ಕರ್ನಾಟಕ ಘೋಷಣೆ ಬಳಿಕ ಕಾರ್ಕಳದಲ್ಲಿದ್ದ ನಕ್ಸಲ್ ನಿಗ್ರಹ ದಳವನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಅರ್ಧ ಪಡೆಯನ್ನು ಕೋಮು ಗಲಭೆ ನಿಯಂತ್ರಣಕ್ಕಾಗಿ ಸ್ಪೆಷಲ್ ಟಕ್ಕನ್ ಫೋರ್ಸ್ ಆಗಿ ಪರಿವರ್ತಿಸಲಾಗಿದೆ. ಇನ್ನರ್ಧ ಪಡೆ ದಳ ಆಗಿಯೇ ಕಾರ್ಯಾಚರಣೆ ನಡೆಸುತ್ತಿದೆ. ಪಾವಗಡದಲ್ಲಿ ನಕ್ಸಲ್ ಚಟುವಟಿಕೆ ಖಾತ್ರಿಯಾದರೆ ನಕ್ಸಲ್ ನಿಗ್ರಹ ಪಡೆಯನ್ನು ಅಲ್ಲಿಗೆ ಕಳುಹಿಸುತ್ತೇವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
