ಬಿಗ್ ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದು, ಅವರನ್ನು ಶೋನಿಂದ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಓಂ ಪ್ರಕಾಶ್ ರಾವ್ ಅವರು ಈಗಾಗಲೇ ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿನ ಕಠಿಣ ವಾತಾವರಣ, ಅದರಲ್ಲೂ ವಿಶೇಷವಾಗಿ ವಿಮಾನದ ಥೀಮ್ ಹೊಂದಿರುವ ಸೆಟ್ನಲ್ಲಿ ಮಲಗುವ ವ್ಯವಸ್ಥೆ ಹಾಗೂ ವಾಸಿಸುವುದರಿಂದ ಅವರಿಗೆ ತೀವ್ರವಾದ ದೈಹಿಕ ಅಸ್ವಸ್ಥತೆ ಮತ್ತು ಕಾಲುನೋವು ಹೆಚ್ಚಾಗಿತ್ತು. ಇದರೊಂದಿಗೆ ರಿಯಾಲಿಟಿ ಶೋನ ನಿರಂತರ ಒತ್ತಡ, ಸ್ಪರ್ಧಿಗಳ ನಡುವಿನ ಚರ್ಚೆಗಳು ಹಾಗೂ ಮನೆಯೊಳಗಿನ ತೀವ್ರ ವಾತಾವರಣದಿಂದಾಗಿ ಅವರಿಗೆ ಮಾನಸಿಕ ಒತ್ತಡ ಮತ್ತು ಆತಂಕ ಉಂಟಾಗಿತ್ತು. ವಯೋಸಹಜ ಸುಸ್ತು ಹಾಗೂ ದೈಹಿಕ ಆಯಾಸದಿಂದ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಎಚ್ಚೆತ್ತ ಬಿಗ್ ಬಾಸ್ ನಿರ್ಮಾಣ ತಂಡವು ತಕ್ಷಣವೇ ಅವರನ್ನು ದೊಡ್ಮನೆಯಿಂದ ಹೊರತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ.
ಗಮನಾರ್ಹ ಸಂಗತಿಯೆಂದರೆ, ಓಂ ಪ್ರಕಾಶ್ ರಾವ್ ಅವರು ಈ ಹಿಂದೆ ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲೂ ಸ್ಪರ್ಧಿಯಾಗಿದ್ದಾಗ ಆರೋಗ್ಯ ಸಮಸ್ಯೆಯ ಕಾರಣದಿಂದಲೇ ಶೋಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರಬಂದಿದ್ದರು. ಸೀಸನ್ 13ರಲ್ಲೂ ಆರಂಭಿಕ ಹಂತದಲ್ಲೇ ಮತ್ತೆ ಅನಾರೋಗ್ಯ ಕಾಡಿದ್ದು, ಅವರು ಚಿಕಿತ್ಸೆಯ ಬಳಿಕ ಮತ್ತೆ ದೊಡ್ಮನೆಗೆ ಮರಳುತ್ತಾರಾ ಅಥವಾ ಈ ಬಾರಿಯೂ ಅವರ ಪಯಣ ಮೊಟಕುಗೊಳ್ಳಲಿದೆಯೇ ಎಂಬುದು ವೈದ್ಯರ ಸಲಹೆಯ ಮೇಲೆ ನಿರ್ಧಾರವಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
