ಬೆಂಗಳೂರು/ಕೋಲಾರ: ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುವ ಹಾಗೂ ಕ್ಯಾನ್ಸರ್ನಂತಹ ಮಾರಕ ರೋಗಗಳಿಗೆ ಕಾರಣವಾಗುವ ಸುಮಾರು 10 ಟನ್ ಶಂಕಾಸ್ಪದ ಸಿಂಥೆಟಿಕ್ (ಕೃತಕ) ಅಡಕೆಯನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗಡಿ ಭಾಗದಲ್ಲಿ ಆರೋಗ್ಯ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೋಲ್ಕತಾದಿಂದ ಬೆಂಗಳೂರಿಗೆ ಕಂಟೇನರ್ನಲ್ಲಿ (ಕ್ಯಾಂಟರ್) ಸಾಗಿಸುತ್ತಿದ್ದ 96 ಮೂಟೆಗಳಷ್ಟು ನಕಲಿ ಅಡಕೆಯನ್ನು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ನ ಚಾಲಕ ಹಾಗೂ ಕ್ಲೀನರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಪ್ರದಾಯಿಕವಾಗಿ ಅಡಕೆಯನ್ನು ಕೊಯ್ದು, ಹಂಡೆಯಲ್ಲಿ ಕುದಿಸಿ ನೈಸರ್ಗಿಕವಾಗಿ ತಯಾರಿಸಲಾಗುತ್ತದೆ. ಆದರೆ ಈ ಸಿಂಥೆಟಿಕ್ ಅಡಕೆಯನ್ನು ತಾಳೆ ಬೀಜಗಳು, ಮರದ ರೆಂಬೆ ಅಥವಾ ಕಾಂಡದ ತಿರುಳುಗಳು ಹಾಗೂ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದಕ್ಕೆ ಆಕರ್ಷಕ ಬಣ್ಣ ಬರಲು ನೀಲಿ, ಕೆಂಪು ಮತ್ತು ಹಳದಿ ಬಣ್ಣಗಳಂತಹ ಕೃತಕ ಹಾಗೂ ಹಾನಿಕಾರಕ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಇಂತಹ ನಕಲಿ ಅಡಕೆಯ ಸೇವನೆಯಿಂದ ಜನರ ಆರೋಗ್ಯದ ಮೇಲೆ ಅತ್ಯಂತ ಗಂಭೀರ ಪರಿಣಾಮ ಉಂಟಾಗಲಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ:
ಈ ಘಟನೆ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, “ಕೋಲಾರದಲ್ಲಿ ಸಿಂಥೆಟಿಕ್ ಅಡಕೆ ಸಾಗಿಸುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ಅಡಕೆಯ ಮಾದರಿಗಳನ್ನು (ಸ್ಯಾಂಪಲ್ ಗಳನ್ನು) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎರಡು ವಾರಗಳಲ್ಲಿ ವರದಿ ಬಂದ ಬಳಿಕ ಕಳಪೆ ಗುಣಮಟ್ಟದ ಅಡಕೆಯ ಕುರಿತು ಸ್ಪಷ್ಟನೆ ಸಿಗಲಿದೆ” ಎಂದಿದ್ದಾರೆ.
“ರಾಜ್ಯದಲ್ಲೇ ಹೇರಳವಾಗಿ ಅಡಕೆ ಬೆಳೆಯುತ್ತಿರುವಾಗ ಹೊರಗಿನಿಂದ ಅಡಕೆ ಏಕೆ ಬರಬೇಕು? ಕಳಪೆ ಆಮದು ಅಡಕೆ ಪೂರೈಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಇಂತಹ ಕಳಪೆ ವಸ್ತುಗಳ ಪರಿಶೀಲನೆಗೆ ಬೆಂಗಳೂರಿನಲ್ಲಿ ಶೀಘ್ರವೇ ಅತ್ಯಾಧುನಿಕ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು ಅಥವಾ ಪ್ರಮುಖ ಲ್ಯಾಬ್ ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು”
— ಸಚಿವ ಯು.ಟಿ. ಖಾದರ್
ಮುಳಬಾಗಿಲು ವೈದ್ಯಾಧಿಕಾರಿ ಡಾ. ಸುಗುಣಾ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನೀಲಿ ಮತ್ತು ಕೆಂಪು ಬಣ್ಣದ ಅಡಕೆ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಲ್ಯಾಬ್ ವರದಿ ಬಂದ ನಂತರ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
