ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ವಿವಿಧ ಸಂಘಟನೆಗಳ ಹೆಸರಿನಲ್ಲಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಕುಖ್ಯಾತ ಶಂಕಿತ ನಕ್ಸಲ್ ಕಣಿಕಲಬಂಡೆ ವೆಂಕಟೇಶನನ್ನು ಪಾವಗಡ ಪೊಲೀಸರು ಸೆ. 15ರ ರಾತ್ರಿ ಕಡಮಲಕುಂಟೆ ಗ್ರಾಮದ ಹೊರವಲಯದ ಬೆಟ್ಟದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ.
ಗಂಗಾಸಾಗರ ಗ್ರಾಮದ ವಾಸಿ ನಾಗಭೂಷಣ್ ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಸೆ. 9ರಂದು ಗಂಗಾಸಾಗರ ಸರ್ವೆ ನಂ. 31/1ರ ಜಮೀನಿನ ಶೆಡ್ಗೇಟ್ಗೆ ಐದು ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಬೆದರಿಕೆ ಹಾಕಿ, ಸಿ.ಪಿ.ಐ (ಎಂಎಲ್), ಸಿ.ಪಿ.ಎಂ ಪೀಪಲ್ ವಾರ್, ಜನಶಕ್ತಿ ಪಕ್ಷ ಹಾಗೂ ದೇವಣ್ಣ ದಳಂ ಹೆಸರಿನಲ್ಲಿ ಆರೋಪಿಯು ಬೆದರಿಕೆ ಪತ್ರವನ್ನು ಕಟ್ಟಿ ಹೋಗಿದ್ದನು. ಈ ದೂರಿನ ಅನ್ವಯ ಪಾವಗಡ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್-2023 ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಸೂಡೋ ನಕ್ಸಲ್ ಆಗಿರುವ ಈತನಿಗೆ ಬೆಟ್ಟಗುಡ್ಡಗಳು ಮತ್ತು ಕಾಡುಗಳಲ್ಲಿ ವಾಸಿಸುವ ಕಲೆ ಗೊತ್ತಿದ್ದು, ಕಳೆದ ಒಂದು ವರ್ಷದಿಂದ ಆಂಧ್ರ ಹಾಗೂ ಕರ್ನಾಟಕ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದನು. ಸೆ. 15ರ ರಾತ್ರಿ ಆರೋಪಿಯು ಕಡಮಲಕುಂಟೆ ಗ್ರಾಮದ ಹೊರ ವಲಯದ ಬೆಟ್ಟದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್.ಕೆ.ವಿ. ಐ.ಪಿ.ಎಸ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಕೆ.ಎಸ್.ಪಿ.ಎಸ್ ಮತ್ತು ಪುರುಷೋತ್ತಮು. ಎಂ.ಎಲ್ ಕೆ.ಎಸ್.ಪಿ.ಎಸ್ ನೇತೃತ್ವದಲ್ಲಿ ಹಾಗೂ ಮಧುಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಂಜುನಾಥ್ ಬಿ. ಅವರ ಮುಂದಾಳತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಪಾವಗಡ ಪೊಲೀಸ್ ಇನ್ ಸ್ಪೆಕ್ಟರ್ ಕೆ. ಸುರೇಶ್ ನೇತೃತ್ವದ ಸಿಬ್ಬಂದಿ ವರ್ಗದವರು ಈ ದಸ್ತಗಿರಿ ಕಾರ್ಯದಲ್ಲಿ ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
