ಕೊರಟಗೆರೆ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ಸಿ.ಎನ್.ದುರ್ಗ ಹೋಬಳಿಯ ಸಿದ್ಧರಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಹಾಗೂ ಮಾದಕ ದ್ರವ್ಯಗಳ ಅಕ್ರಮ ಮಾರಾಟ ಜೋರಾಗಿ ನಡೆಯುತ್ತಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. ಆದರೆ, ಇಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿರುವ ಅಬಕಾರಿ ಇಲಾಖೆಯಲ್ಲಿ ತೀವ್ರ ಸಿಬ್ಬಂದಿ ಕೊರತೆ ಇರುವುದು ಈಗ ದೊಡ್ಡ ಸಮಸ್ಯೆಯಾಗಿ ಮುನ್ನೆಲೆಗೆ ಬಂದಿದೆ.
ಸಿದ್ಧರಬೆಟ್ಟದ ಸುತ್ತಮುತ್ತ ಶ್ರೀಗಂಧದ ಮರಗಳ ಕಳ್ಳತನ ಹಾಗೂ ಗಾಂಜಾ ಮಾರಾಟದ ಕುರಿತು ಸಾರ್ವಜನಿಕರಿಂದ ಪ್ರಶ್ನೆಗಳು ಎದುರಾದಾಗ, ಕೊರಟಗೆರೆ ಅಬಕಾರಿ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಟಿ.ಆರ್. ಕೀರ್ತನ ಅವರು, ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ, ಹೀಗಿರುವಾಗ ಹೇಗೆ ಕೆಲಸ ಮಾಡುವುದು ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಕೊರಟಗೆರೆ ಅಬಕಾರಿ ಇಲಾಖೆಯಲ್ಲಿ ಒಟ್ಟು 13 ಸಿಬ್ಬಂದಿ ಇರಬೇಕಾದ ಸ್ಥಳದಲ್ಲಿ ಪ್ರಸ್ತುತ ಕೇವಲ 6 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 5 ಕಾನ್ಸ್ಟೆಬಲ್ ಹುದ್ದೆಗಳ ಪೈಕಿ ಇಬ್ಬರು ಮಾತ್ರ ಕರ್ತವ್ಯದಲ್ಲಿದ್ದು, ಅವರೂ ಸಹ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಎಫ್ಡಿಸಿ, ಎಸ್ಡಿಸಿ ಮತ್ತು ಇತರೆ ಹುದ್ದೆಗಳು ಕೂಡ ಖಾಲಿ ಇವೆ.
“ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಕಚೇರಿಯಲ್ಲಿ ಅಗತ್ಯ ಸಿಬ್ಬಂದಿ ಬಲವಿಲ್ಲ. ಲಭ್ಯವಿರುವ ಕೆಲವೇ ಸಿಬ್ಬಂದಿಯನ್ನು ಇಟ್ಟುಕೊಂಡು ವಿಶಾಲವಾದ ಗ್ರಾಮೀಣ ಹಾಗೂ ಅರಣ್ಯ ಪ್ರದೇಶದಲ್ಲಿ ನಿರಂತರ ತಪಾಸಣೆ ನಡೆಸುವುದು ಕಷ್ಟಸಾಧ್ಯವಾಗುತ್ತಿದೆ.”
— ಟಿ.ಆರ್. ಕೀರ್ತನ, ಅಬಕಾರಿ ಸರ್ಕಲ್ ಇನ್ಸ್ಪೆಕ್ಟರ್, ಕೊರಟಗೆರೆ
ತಾಲ್ಲೂಕಿನ ಗ್ರಾಮೀಣ ಮತ್ತು ಅರಣ್ಯ ಒಡಲಿನ ಪ್ರದೇಶಗಳಲ್ಲಿ ಅಕ್ರಮ ಮದ್ಯ, ಗಾಂಜಾ ಹಾಗೂ ಮಾದಕ ವಸ್ತುಗಳ ಸಾಗಣೆಯನ್ನು ತಡೆಯುವುದು ಅಬಕಾರಿ ಇಲಾಖೆಯ ಮುಖ್ಯ ಜವಾಬ್ದಾರಿಯಾಗಿದೆ. ಆದರೆ, ಸಿಬ್ಬಂದಿಯ ಕೊರತೆಯಿಂದಾಗಿ ಸಿದ್ಧರಬೆಟ್ಟದಂತಹ ಪ್ರದೇಶಗಳಲ್ಲಿ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಲು ಮತ್ತು ನಿರಂತರ ಗಸ್ತು ತಿರುಗಲು ಸಾಧ್ಯವಾಗುತ್ತಿಲ್ಲ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು ಎಂದು ಸಾರ್ವಜನಿಕರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
