ಬೀದರ್: ಪ್ರಸಕ್ತ ಸಾಲಿನಲ್ಲಿ ಸಮರ್ಪಕ ಮಳೆಯಾಗದೆ ತೀವ್ರ ಸಂಕಷ್ಟ ಎದುರಿಸುತ್ತಿರುವ ಬೀದರ್ ಜಿಲ್ಲೆಯ ಔರಾದ್ ತಾಲೂಕನ್ನು ಮುಂಬರುವ ಸೆಪ್ಟೆಂಬರ್ 30ರೊಳಗೆ ‘ಬರಪೀಡಿತ ಪ್ರದೇಶ’ ಎಂದು ಸರ್ಕಾರಿ ಮಟ್ಟದಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿಯವರ ಮಾಜಿ ಅಪರ ಕಾರ್ಯದರ್ಶಿ ಹಾಗೂ ಕಳೆದ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸಕ್ತ ವರ್ಷ ಸಮರ್ಪಕ ಮಳೆಯಾಗದೆ ಕ್ಷೇತ್ರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರೈತರು ಆತಂಕಪಡುವ ಅಗತ್ಯವಿಲ್ಲ, ಬರ ಘೋಷಣೆ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಔರಾದ್ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಈಗಾಗಲೇ ಮನವಿಪತ್ರ ಸಲ್ಲಿಸಲಾಗಿದೆ. ಅಲ್ಲದೇ ಶನಿವಾರ ಕಂದಾಯ ಇಲಾಖೆ ಕಾರ್ಯದರ್ಶಿ ಮನೋಜಕುಮಾರ ಮೀನಾ ಅವರನ್ನು ಭೇಟಿ ಮಾಡಿ ಔರಾದ್ ಕ್ಷೇತ್ರದ ಬರ ಪರಿಸ್ಥಿತಿ, ಮಳೆ ಕೊರತೆ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಚರ್ಚೆಯ ವೇಳೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಬರಪೀಡಿತ ಪ್ರದೇಶಗಳ ಘೋಷಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ತಿಂಗಳ ಅಂತ್ಯದೊಳಗೆ ಔರಾದ್ ತಾಲೂಕನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಶಿಂಧೆ ವಿವರ ನೀಡಿದ್ದಾರೆ.
ಈಗಾಗಲೇ ಔರಾದ್ ಕ್ಷೇತ್ರದ ಕಮಲನಗರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಕ್ಷೇತ್ರದ ಜನರು ಹಾಗೂ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು, ಔರಾದ್ ತಾಲೂಕಿಗೂ ಶೀಘ್ರವೇ ಬರ ಘೋಷಣೆಯಾಗುವ ಮೂಲಕ ರೈತರಿಗೆ ಸರ್ಕಾರದ ಪರಿಹಾರ ಹಾಗೂ ಅಗತ್ಯ ನೆರವು ದೊರೆಯುವ ಪೂರ್ಣ ಭರವಸೆಯಿದೆ ಎಂದು ಹೇಳಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
